ಡಾ.ಸುಧಾಕರ್ ಅವರೇ ನಿಮಗೆ ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ ಕೂಡಲೇ ರಾಜೀನಾಮೆ ಕೊಡಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸ್ವಾಮಿ ಸುರೇಶ್ ಕುಮಾರ್ ಅವರೇ ಜನರ ಸಾವಿನಲ್ಲಿ ಸುಳ್ಳು ಲೆಕ್ಕ ಕೊಟ್ಟು ನಿಮ್ಮ ಹುಳುಕು ಮುಚ್ಚಿಕೊಳ್ಳುವ ಬಂಡ ಬಾಳು ಬಾಳಬೇಕಾ? ನಿಮಗೆ ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ ನೀವು, ಸಚಿವ ಡಾ.ಸುಧಾಕರ್ ಕೂಡಲೇ ರಾಜೀನಾಮೆ ಕೊಡಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು,
ಆರೋಗ್ಯ ಸಚಿವ ಡಾ.ಸುಧಾಕರ್ ಅವರೇ ಜನ ಸಾಯುತ್ತಿದ್ದರೂ ಕಮಿಷನ್ ಲೆಕ್ಕ ಹಾಕುವುದರಲ್ಲಿ ಮುಳುಗಿದ್ದೀರಾ? ಹೆಣದ ಮೇಲೆ ಹಣ ಮಾಡಿ ಯಾವ ಸಾಮ್ರಾಜ್ಯ ಕಟ್ಟಲು ಹೊರಟಿದ್ದೀರಾ ಸ್ವಾಮಿ?
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಪ್ರತಿನಿತ್ಯ 70 ಟನ್ ಆಕ್ಸಿಜನ್ ಬೇಡಿಕೆ ಇದೆ.
ಆದರೆ ಕೇವಲ 20 ಟನ್ ಪೂರೈಕೆ. ಈ ಲೋಪಗಳಿದ್ದರೂ ಆರೋಗ್ಯ ಮಂತ್ರಿಗಳು ಗಮನ ಹರಿಸದೆ, ಸುಳ್ಳು ಹೇಳುತ್ತಲೇ 24 ಸಾವುಗಳಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ಇಷ್ಟೆಲ್ಲ ವೈಫಲ್ಯವಿದ್ದರೂ ಸಚಿವರ ತಲೆದಂಡಕ್ಕೆ ಮಿನಾಮೇಷವೇಕೆ? ರಾಜ್ಯದಲ್ಲಿ ಜನ ಕೊರೋನಾ ಸೋಂಕಿನಿಂದ ಸಾಯುತ್ತಿರುವುದಕ್ಕಿಂತ ಹೆಚ್ಚಾಗಿ ಸರ್ಕಾರ ಬೇಜವಾಬ್ದಾರಿತನದಿಂದ ಉದ್ಭವಿಸಿರುವ ಆಕ್ಸಿಜನ್, ಐಸಿಯು ಹಾಸಿಗೆ, ಔಷಧಗಳ ಪೂರೈಕೆ ಕೊರತೆಯಿಂದ ಸಾಯುತ್ತಿದ್ದಾರೆ. ಈ ಸಾವಿಗೆಲ್ಲ ಅಸಮರ್ಥ ಸರ್ಕಾರ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಅವರೇ ಹೊಣೆ ಎಂದಿದ್ದಾರೆ.

ಕಳೆದ ವರ್ಷ ಬೆಂಗಳೂರಿನಲ್ಲಿ ಕೊರೋನಾ ಉಸ್ತುವಾರಿ ವಹಿಸಿಕೊಳ್ಳಲು ಪೈಪೋಟಿ ನಡೆಸಿದ್ದ ಅಷ್ಟದಿಗ್ಪಾಲಕ ಮಂತ್ರಿಗಳು, ಈ ಬಾರಿ ಜನರ ಜೀವ ಉಳಿಸಲು ಆಕ್ಸಿಜನ್ ಪೂರೈಸಲು ಯಾಕೆ ಉತ್ಸುಕರಾಗಿಲ್ಲ? ಆರೋಗ್ಯ ಸಚಿವ ಡಾ.ಸುಧಾಕರ್ ಅವರೇ ನಿಮ್ಮ ಕೈಯಲ್ಲಿ ಪರಿಸ್ಥಿತಿ ನಿಯಂತ್ರಣ ಸಾಧ್ಯವಾಗದಿದ್ದರೆ ರಾಜಿನಾಮೆ ಕೊಡಿ ಸ್ವಾಮಿ, ರಾಜ್ಯ ಸರ್ಕಾರ ಯಾವುದೇ ‌ನೆಪಗಳನ್ನು ಹೇಳದೇ ಕೂಡಲೇ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್ ನ್ನು ಅಗತ್ಯಕ್ಕನುಸಾರ ಒದಗಿಸಬೇಕು,ಇಲ್ಲವೇ ಅಧಿಕಾರದಿಂದ ತೊಲಗಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವ ಡಾ.ಸುಧಾಕರ್ ಅವರ ನಿರ್ಲಕ್ಷ್ಯದಿಂದ ಇಡೀ ರಾಜ್ಯ ಆಕ್ಸಿಜನ್ ಕೊರತೆಯಿಂದ ಬಳಲುತ್ತಿದೆ. ಚಾಮರಾಜನಗರದಲ್ಲಿ 24 ಮಂದಿ ರೋಗಿಗಳು ಇದೇ ಕಾರಣಕ್ಕೆ ಮೃತಪಟ್ಟಿದ್ದಾರೆ.ಇದಕ್ಕೆ ಸಚಿವ ಸುಧಾಕರ್ ಅವರೇ ನೇರ ಹೊಣೆ. ಕರ್ನಾಟಕ ರಾಜಕೀಯ ಇತಿಹಾಸ ಕಂಡ ಅತ್ಯಂತ ಬೇಜವಾಬ್ದಾರಿ ಆರೋಗ್ಯ ಸಚಿವ ಎಂದು ಕೆಪಿಸಿಸಿ ವಕ್ತಾರೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು