ದೌರ್ಜನ್ಯಕ್ಕೊಳಗಾದ ಮಹಿಳೆ ನೇರವಾಗಿ ಎಸ್.ಐ.ಟಿ ಮುಂದೆ ಹಾಜರಾಗುವುದು ಸೂಕ್ತ : ಮಾಜಿ ಸಿಎಂ ಸಿದ್ದರಾಮಯ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ದೌರ್ಜನ್ಯಕ್ಕೊಳಗಾದ ಯುವತಿಗೆ ರಕ್ಷಣೆ ಕೊಡಿಸುವ ಸಂಬಂಧ ನಿನ್ನೆ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಇಂದು ಪೊಲೀಸ್ ಕಮಿಷನರ್ ಅವರ ಜೊತೆಗೂ ಮಾತನಾಡುತ್ತೇನೆ. ರಕ್ಷಣೆ ಕೇಳಿದವರಿಗೆ ರಕ್ಷಣೆ ನೀಡಬೇಕಾದುದ್ದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯ. ರಮೇಶ್ ಜಾರಕಿಹೊಳಿ ಅವರಿಂದ ದೌರ್ಜನ್ಯಕ್ಕೊಳಗಾದ ಮಹಿಳೆ ಹೀಗೆ ವೀಡಿಯೋ ಮೂಲಕ ರಕ್ಷಣೆ ಕೇಳುವ ಬದಲು ನೇರವಾಗಿ ಎಸ್.ಐ.ಟಿ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸುವುದು ಸೂಕ್ತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸಿಡಿ ಹಗರಣದ ಬಗ್ಗೆ ನಾವು ಧರಣಿ ನಡೆಸುವ ವೇಳೆ ರಾಜ್ಯ ಸರ್ಕಾರ ಕೆ.ಟಿ.ಟಿ.ಪಿ ಕಾಯ್ದೆಗೆ ತಿದ್ದುಪಡಿ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸರ್ಕಾರಿ ಕಾಂಟ್ರಾಕ್ಟ್ ಗಳಲ್ಲಿದ್ದ ಮೀಸಲಾತಿಯನ್ನು ಕಸಿದುಕೊಂಡಿದೆ. ಶೋಷಿತ ಸಮುದಾಯಗಳಿಗೆ ಇದರಿಂದ ಅನ್ಯಾಯವಾಗಲಿದ್ದು, ತಿದ್ದುಪಡಿಯನ್ನು ವಾಪಾಸು ಪಡೆಯಬೇಕೆಂದು ಆಗ್ರಹಿಸುತ್ತೇನೆ.

ರಮೇಶ್ ಜಾರಕಿಹೊಳಿ ಬಳಿ ಅಂಥಾ ಸ್ಪೋಟಕ ಸಾಕ್ಷ್ಯ ಇದ್ದಿದ್ದರೆ, ಈ ಹಿಂದೆ ದೂರು ದಾಖಲು ಮಾಡಿದಾಗಲೇ ಸಾಕ್ಷ್ಯವನ್ನೂ ನಮೂದಿಸಬೇಕಿತ್ತು. ಇಷ್ಟುದಿನದ ವರೆಗೆ ಸಾಕ್ಷ್ಯವನ್ನು ಬಚ್ಚಿಟ್ಟಿದ್ದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಇನ್ನಾದರೂ ತಡ ಮಾಡದೆ ಎಸ್.ಐ.ಟಿ ಮುಂದೆ ತಮ್ಮ ಬಳಿಯಿರುವ ಸಾಕ್ಷ್ಯವನ್ನು ಹಾಜರುಪಡಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಈ ಸಲದ ಅಧಿವೇಶನಕ್ಕೆ ನಮ್ಮ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಬಜೆಟ್ ಮೇಲೆ ಚರ್ಚಿಸಿದ್ದೇವೆ, ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿದ್ದೇವೆ, ನಮ್ಮ ಶಾಸಕರು ಸಾಕಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ಸದನದ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸದನದ ಸದಸ್ಯರೊಬ್ಬರ ಆಶ್ಲೀಲ ವೀಡಿಯೋ ಒಂದು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಅದರ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಬೇಕಿರುವುದು ವಿರೋಧ ಪಕ್ಷದ ಕರ್ತವ್ಯ. ಅದನ್ನು ಮಾಡಿದ್ದೇವೆ. ನಮ್ಮ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡದೆ, ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇದ್ದಾಗ ಅನಿವಾರ್ಯವಾಗಿ ಧರಣಿ ಮಾಡಿದ್ದೇವೆ. ಸದನದಲ್ಲಿ ವಿರೋಧ ಪಕ್ಷದವರು ಧರಣಿಯಲ್ಲಿ ನಿರತರಾಗಿದ್ದಾಗ ಸರ್ಕಾರಕ್ಕೆ ಮಸೂದೆಗಳನ್ನು ಮಂಡಿಸಿ, ಅನುಮೋದನೆ ಪಡೆಯಲು ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟಿದ್ದು ತಪ್ಪು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ನೀಡದೆ ಮಸೂದೆಗಳು ಅಂಗೀಕಾರವಾದರೆ ಅದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು