ಬಾಗಪತ್ : ಕೇಂದ್ರ ಸರಕಾರ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾಯ್ದೆ ವಿರುದ್ಧ ಹಲವಾರು ದಿನಗಳಿಂದ ಪ್ರತಿಭಟನಾ ನಿರತರಾಗಿರುವ ರೈತರ ಪರವಾಗಿ ಇನ್ನೊಂದು ಧ್ವನಿ ಮೊಳಗಿದೆ.ಮೇಘಾಲಯ ರಾಜ್ಯದ ರಾಜಪಾಲ ಸತ್ಯ ಪಾಲ್ ಮಲಿಕ್ ಭಾನುವಾರ ರೈತರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು “ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ವಿರುದ್ಧ ಬಲ ಪ್ರಯೋಗವನ್ನು ಬಳಸಬೇಡಿ ಮತ್ತು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ದೆಹಲಿಯಿಂದ ಖಾಲಿ ಕೈಯಿಂದ ಮನೆಗೆ ಕಳುಹಿಸಬೇಡಿ.
ಯಾವುದೇ ಕಾನೂನುಗಳು ರೈತರ ಪರವಾಗಿಲ್ಲ. ರೈತರು ಮತ್ತು ಸೈನಿಕರು ತೃಪ್ತರಾಗಿಲ್ಲದ ದೇಶವು ಮುಂದೆ ಸಾಗಲು ಸಾಧ್ಯವಿಲ್ಲ.ಆ ದೇಶವನ್ನು ಉಳಿಸಲು ಸಾಧ್ಯವಿಲ್ಲ. ಆದ್ದರಿಂದ, ಸೇನೆ ಮತ್ತು ರೈತರನ್ನು ತೃಪ್ತಿಪಡಿಸಬೇಕು.ಹಲವಾರು ದಿನಗಳಿಂದ ಪ್ರತಿಭಟನಾ ನಿರತರಾಗಿರುವ ರೈತರಿಗೆ ನೋವುಂಟು ಮಾಡದಿರಿ.ಅವರ ಪ್ರತಿಭಟನೆಯನ್ನು ಹತ್ತಿಕ್ಕಬೇಡಿ” ಎಂದು ಪ್ರಧಾನಿ ಮೋದಿಗೆ ಮತ್ತು ಕೇಂದ್ರ ಗೃಹ ಸಚಿವ ಅಮತ್ ಶಾ ರವರೊಂದಿಗೆ ಮನವಿ ಮಾಡುವ ಮೂಲಕ ಒತ್ತಾಯಿಸಿದರು.