ಸಜ್ಜನ ರಾಜಕಾರಣಿ ಧರ್ಮೇಗೌಡ ಅವರ ದುರಂತ ಅಂತ್ಯ| ಚರ್ಚೆಗೆ ಕಾರಣವಾದ ಅಂಶಗಳಿವು…

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(28-12-2020):  ಕಡೂರು ತಾಲೂಕಿನ ಗುಣಸಾಗರ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿತ್ತು. ಕರ್ನಾಟಕದ ಇತಿಹಾಸದಲ್ಲೇ ಉಪಸಭಾಪತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲಾಗಿದೆ.

ಬಾಲ್ಯದಿಂದಲೇ ರಾಜಕಾರಣ ಮಾಡಿಕೊಂಡು ಬಂದಿದ್ದ ಪ್ರಬುದ್ದ ರಾಜಕಾರಣಿಯ ದುರಂತ ಸಾವು ಸಹಜವಾಗಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು. ಚಿಕ್ಕಮಗಳೂರು ಜಿಲ್ಲೆಯ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದಿದ್ದ  ಧರ್ಮೇಗೌಡ ಅವರ ತಂದೆಯೂ ಈ ಹಿಂದೆ ಶಾಸಕರಾಗಿದ್ದರು. ಸಹೋದರ ಕೂಡ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ತರೀಕೆರೆ ತಾಲ್ಲೂಕುಗಳಲ್ಲಿ ಧರ್ಮೇಗೌಡ ಜನಪ್ರಿಯರಾಗಿದ್ದರು. 2004ರಲ್ಲಿ ಬೀರೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದ ಮರಣ ಪತ್ರ ಚರ್ಚೆಗೆ ಕಾರಣವಾಗಿದೆ.ಧರ್ಮೇಗೌಡರು ತಮ್ಮ ಮರಣ ಪತ್ರದಲ್ಲಿ ಏನು ಬರೆದಿದ್ದಾರೆ ಎಂಬುದನ್ನು ಅದಿಕಾರಿಗಳು ಈವರೆಗೂ ಬಾಯಿ ಬಿಟ್ಟಿಲ್ಲ, ಆದರೂ ಅದರಲ್ಲಿರುವ ಅಂಶಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಅವರು ಮರಣ ಪ್ರಮಾಣ ಪತ್ರದಲ್ಲಿ ವಿಧಾನ ಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಕಹಿ ಘಟನೆ, ಆಸ್ತಿ ವಿಚಾರ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಆಪ್ತರಾಗಿದ್ದ ಎಸ್.ಎಲ್.ಧರ್ಮೇಗೌಡ, ಗನ್‌ಮ್ಯಾನ್‌ ಮತ್ತು ಎಸ್ಕಾರ್ಟ್ ಸಿಬ್ಬಂದಿಯನ್ನು ಮನೆಗೆ ಕಳಿಸಿ ನಿನ್ನೆ ಸಂಜೆ ವೇಳೆಗೆ ತಮ್ಮ ಡ್ರೈವರ್ ಜತೆ ಕಾರಿನಲ್ಲಿ ಸಖರಾಯಪಟ್ಟಣದ ಮನೆಯಿಂದ ಗುಣಸಾಗರಕ್ಕೆ ಬಂದಿದ್ದರು.

ಬಳಿಕ ರೈಲು ಹಳಿ ಬಳಿ ಕಾರು ನಿಲ್ಲಿಸಲು ಡ್ರೈವರ್‌ಗೆ ಹೇಳಿ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಎಂದು ಚಾಲಕನನ್ನು ಕಳಿಸಿದ್ದಾರೆ. ನಂತರ ಕಡೂರಿನ ವ್ಯಕ್ತಿಗೆ ಕರೆ ಮಾಡಿ ಜನಶತಾಬ್ಧಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ಬಳಿಕ ತಮ್ಮ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಚಲಿಸುವ ರೈಲಿಗೆ ತಲೆ ಕೊಟ್ಟಿದ್ದಾರೆ. ರಾತ್ರಿ 10 ಗಂಟೆಯಾದರೂ ವಾಪಸಾಗದ ಹಿನ್ನೆಲೆಯಲ್ಲಿ ಧರ್ಮೇಗೌಡ ಅವರಿಗಾಗಿ ಹುಡುಕಾಟ ಶುರುವಾಗಿತ್ತು. ಈ ವೇಳೆ ಗುಣಸಾಗರ ಬಳಿ ತಡರಾತ್ರಿ 1.30ರ ಸುಮಾರಿಗೆ ಧರ್ಮೇಗೌಡರ ಮೃತದೇಹ ಪತ್ತೆಯಾಗಿದೆ.

ಇನ್ನು ಮರ್ಯಾದೆಗೆ ಅಂಜಿ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕೆಲ ರಾಜಕಾರಣಿಗಳು ಮಾತನಾಡುತ್ತಿದ್ದಾರೆ. ಇತ್ತೀಚಿನ ವಿಧಾನಪರಿಷತ್ ನಲ್ಲಿ ನಡೆದ ಘಟನೆ ಅವರನ್ನು ಸಹಜವಾಗಿ ಕಿನ್ನತೆಗೆ ತಳ್ಳಿ ಹಾಕಿತ್ತು ಎಂದು ಹಲವರು ಹೇಳುತ್ತಿದ್ದಾರೆ. ಅವರಿಗೆ ವಿಧಾನಪರಿಷತ್ ನಲ್ಲಿನ ಘಟನೆಯಿಂದ ಆದ ನೋವನ್ನು ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಬಳಿ ಹಂಚಿಕೊಂಡಿದ್ದಾರೆಂದು ಹೇಳಲಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು