ನವದೆಹಲಿ(12-12-2020): ಕೇಂದ್ರ ಸರಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು ದೆಹಲಿಯನ್ನು ಸಂಪೂರ್ಣವಾಗಿ ಸುತ್ತುವರಿಯಲು ಸಿದ್ಧತೆ ನಡೆಸುತ್ತಿದ್ದಾರೆ. ದೆಹಲಿ ಪ್ರವೇಶಿಸುವ ಉಳಿದ ದಾರಿಗಳನ್ನೂ ಬಂದ್ ಮಾಡಿ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಆಗ್ರಾ ಎಕ್ಸ್ಪ್ರೆಸ್ ಮತ್ತು ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನೂ ತಡೆಹಿಡಿಯಲು ರೈತರು ಈಗಾಗಲೇ ಮಾರ್ಚ್ ಆರಂಭಿಸಿದ್ದಾರೆ. ಸೋಮವಾರ ಸಿಂಗೂ ಗಡಿಯಲ್ಲಿನ ರಸ್ತೆಯಲ್ಲೂ ಉಪವಾಸ ಸತ್ಯಾಗ್ರಹವನ್ನು ನಡೆಸುವರು. ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶಗಳಿಂದ ಬರುವ ರೈತರು ಅಗ್ರಾ ಎಕ್ಸ್ಪ್ರೆಸ್ ಮತ್ತು ಜೈಪುರ ಹೆದ್ದಾರಿಗಳತ್ತ ಸಾಗುತ್ತಿದ್ದಾರೆ.
ಇನ್ನುಳಿದ ತಿಕ್ರಿ, ಗಾಝಿಪುರ, ಜಯಪುರ-ಆಗ್ರಾ ದಾರಿಗಳು ಬಂದ್ ಮಾಡಿದರೆ, ದೆಹಲಿಗಿರುವ ಸರಕು ಸಾಗಾಣಿಕಾ ವ್ಯವಸ್ಥೆಯು ಸಂಪೂರ್ಣವಾಗಿ ಸ್ತಬ್ಧವಾಗಲಿದೆ.
ಇತ್ತ ಕಡೆ ರೈತರ ಹರಿಯುವಿಕೆಯನ್ನು ತಡೆಯುವ ಸಲುವಾಗಿ ಹರಿಯಾಣದ ಕೆಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಆ ಜಿಲ್ಲೆಗಳ ಮೂಲಕ ಜೈಪುರ ರಾಷ್ಟ್ರೀಯ ಹೆದ್ದಾರಿಯು ಸಾಗಿ ಹೋಗುವುದೇ ಇದಕ್ಕೆ ಕಾರಣವಾಗಿದೆ.
ರೈತರ ಸಮಸ್ಯೆ ಪರಿಹರಿಸಲು ನ್ಯಾಯಾಲಯವು ಹಸ್ತಕ್ಷೇಪ ಮಾಡಬೇಕೆಂದು ಭಾರತೀಯ ಕಿಸಾನ್ ಯೂನಿಯನ್ ಅರ್ಜಿ ಸಲ್ಲಿಸಿತ್ತು. ಅದನ್ನು ಬುಧವಾರ ಸುಪ್ರೀಂ ಕೋರ್ಟ್ ಪರಿಗಣಿಸಲಿದೆ.