ದೆಹಲಿ ಹೈಕೋರ್ಟ್ ನ್ಯಾಯಾಧೀಶರು, ಉದ್ಯೋಗಸ್ಥರು ಮತ್ತು ಅವರ ಕುಟುಂಬಸ್ಥರ ಚಿಕಿತ್ಸೆಗಾಗಿ ಫೈವ್ ಸ್ಟಾರ್ ಹೋಟೆಲ್ ಸೌಲಭ್ಯ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಅನಿಯಂತ್ರಿತವಾಗಿ ಏರುತ್ತಿರುವ ಕೋವಿಡ್ ಮಹಾಮಾರಿ ದೇಶದ ಜನರನ್ನು ಮರಣಮೃದಂಗವಾಗಿ ಕಾಡುತ್ತಿದೆ. ಪ್ರಾಥಮಿಕ ವೈದ್ಯಕೀಯ ಸೌಲಭ್ಯಗಳಿಗೂ ಕೊರತೆ ಕಂಡು ಬಂದಿದೆ. ಪ್ರಾಣವಾಯುವಿಗಾಗಿ ಹಾಹಾಕಾರವೆದ್ದಿದೆ. ಅಂಬ್ಯಲೆನ್ಸುಗಳಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೂ ಕೊರತೆ. ಸತ್ತರೂ ಸ್ಮಶಾನಗಳಿಲ್ಲದೇ ಎಲ್ಲೆಂದರಲ್ಲಿ ಶವಗಳನ್ನು ಸುಡಲಾಗುತ್ತಿದೆ. ಮೃತರ ಬಂಧುಗಳಿಗೂ ಅಂತ್ಯ ಸಂಸ್ಕಾರ ಮಾಡಲು ಅವಕಾಶವಿಲ್ಲದಂತಹ ದಾರುಣ ಪರಿಸ್ಥಿತಿಯಿದೆ.

ಆದರೆ ಇದಾವುದೂ ದೆಹಲಿ ಹೈಕೋರ್ಟ್ ನ್ಯಾಯಾಧೀರಿಗೆ, ಅಲ್ಲಿನ ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಅನ್ವಯವಾಗುವುದಿಲ್ಲ. ಯಾಕೆಂದರೆ ರಾಜ್ಯದ ಪಂಚತಾರಾ ಹೋಟೆಲುಗಳಲ್ಲೊಂದಾದ ಅಶೋಕ ಹೋಟೆಲನ್ನು ಅವರಿಗಾಗಿ ಸಿದ್ಧಪಡಿಸಲಾಗಿದೆ. ಅಶೋಕ ಹೋಟೆಲಿನ ನೂರು ಕೋಣೆಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಸವಲತ್ತುಗಳನ್ನು ವ್ಯವಸ್ಥೆಗೊಳಿಸಿ, ಇಡೀ ಹೋಟೆಲನ್ನೇ ಕೋವಿಡ್ ಕೇರ್ ಸೆಂಟರನ್ನಾಗಿ ಪರಿವರ್ತಿಸಲಾಗಿದೆ.

ಇದನ್ನು ಸ್ವತಃ ಹೈಕೋರ್ಟಿನ ಸೂಚನೆಯಂತೆ ದೆಹಲಿ ಸರಕಾರವೇ ಸಜ್ಜುಗೊಳಿಸಿದೆ. ದೆಹಲಿ ಹೈಕೋರ್ಟಿನ ನ್ಯಾಯಾಧೀಶರು ಮತ್ತಿತರ ಸಿಬ್ಬಂದಿಗಳಿಗಾಗಿಯಷ್ಟೇ ಒಂದು ಕಮ್ಯೂನಿಟಿ ಹೆಲ್ತ್ ಕೇರ್ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಸರಕಾರವು ರೀತಿಯ ಕ್ರಮಕ್ಕೆ ಮುಂದಾಗಿದೆ. ಚಾಣಕ್ಯಪುರಿ ಸಬ್ ಡಿವಿಝನಲ್ ಮ್ಯಾಜಿಸ್ಟ್ರೇಟ್ ಗೀತಾ ಗ್ರೋವರ್ ಅದೇಶ ನೀಡಿದ್ದು, ಅದೀಗ ಕಾರ್ಯರೂಪಕ್ಕೂ ಬಂದಿದೆ.

ಆಗಾಗ ಆಕ್ಸಿಜನ್ ಮಟ್ಟವನ್ನು ಅಳೆಯುವ ಉಪಕರಣಗಳು, ಹೆಚ್ಚಿನ ಚಿಕಿತ್ಸೆ ಅಗತ್ಯವೆಂದು ಕಂಡು ಬಂದರೆ ಆಕ್ಸಿಜನ್ ಸೌಲಭ್ಯ ಹೊಂದಿರುವ, ಸದಾ ಸಿದ್ಧವಾಗಿರುವ ಅಂಬ್ಯುಲೆನ್ಸುಗಳು ಎಲ್ಲವೂ ಇರಬೇಕೆಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಚಾಣಕ್ಯಪುರಿಯ ಪ್ರೀಮಸ್ ಆಸ್ಪತ್ರೆಗೆ ಅಶೋಕ ಹೋಟೆಲನ್ನು ನಿರ್ವಹಣೆ ಮಾಡುವ ಹೊಣೆಯನ್ನು ವಹಿಸಿ ಕೊಡಲಾಗಿದೆ. ಹೋಟೆಲಿನ ಸಿಬ್ಬಂದಿಗಳಿಗೆ ಕೋವಿಡ್ ರೋಗಿಗಳನ್ನು ಆರೈಕೆ ಮಾಡುವ ಪ್ರಾಥಮಿಕ ಆರೋಗ್ಯ ತರಬೇತಿಯನ್ನು ಈ ಆಸ್ಪತ್ರೆಯೇ ನೀಡಲಿದೆ. ಹೋಟೆಲ್ ಸಿಬ್ಬಂದಿಗಳ ಕೊರತೆ ಕಂಡು ಬಂದರೆ ಆಸ್ಪತ್ರೆಯೇ ಸಿಬ್ಬಂದಿಗಳನ್ನು ಕಳುಹಿಸಬೇಕಿದೆ. ರೋಗಿಗಳಿಗೆ ಆಹಾರ ಒದಗಿಸುವುದು, ಹೋಟೆಲಿನ ಕೋಣೆಗಳನ್ನು ಸ್ವಚ್ಛಗೊಳಿಸುವುದು, ಆಗಾಗ ಸ್ಯಾನಿಟೈಝರುಗಳನ್ನು ಸಿಂಪಡಿಸುವುದು ಸೇರಿದಂತೆ ಎಲ್ಲಾ ಕೆಲಸಕಾರ್ಯಗಳನ್ನು ಹೋಟೆಲ್ ಆಡಳಿತ ಮಂಡಳಿಯು ಮಾಡಬೇಕೆಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.

ಹೋಟೆಲಿನ ಎಲ್ಲಾ ಖರ್ಚುವೆಚ್ಚಗಳನ್ನು ಆಸ್ಪತ್ರೆಯೇ ಭರಿಸಬೇಕಿದ್ದು, ಆಸ್ಪತ್ರೆಗೆ ತಗಲುವ ಒಟ್ಟು ವೆಚ್ಚವನ್ನು ಸರಕಾರ ಪಾವತಿಸಬೇಕಿದೆ.

ದೇಶದಲ್ಲಿ ತೀವ್ರವಾಗಿ ಕೋವಿಡ್ ಪೀಡಿತವಾಗಿರುವ ರಾಜ್ಯಗಳಲ್ಲಿ ದೆಹಲಿಯೂ ಒಂದು. ನಿನ್ನೆಯ ದಿನ ದಾಖಲೆಯ 380 ಜನರು ಕೋವಿಡ್ ತಗುಲಿ ಮೃತಪಟ್ಟಿದ್ದಾರೆ. ಪ್ರತಿದಿನ ಗಣನೆಯಲ್ಲೇ ಇದು ಅತ್ಯಂತ ಹೆಚ್ಚು. ನಿನ್ನೆ 20,000 ಮಂದಿ ಹೊಸದಾಗಿ ಕೋವಿಡ್ ಸೋಂಕು ತಗುಲಿಸಿಕೊಂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು