ನವದೆಹಲಿ(19-11-2020): ಮೂರು ತಿಂಗಳೊಳಗೆ ಸುಮಾರು ಎಪ್ಪತ್ತಾರು ನಾಪತ್ತೆಯಾಗಿದ್ದ ಮಕ್ಕಳನ್ನು ಕಂಡು ಹಿಡಿದು, ರಕ್ಷಿಸಿದ ಹೆಡ್ ಕಾನ್ಸ್ಟೇಬಲಿಗೆ ಪೋಲೀಸ್ ಇಲಾಖೆಯು ಮುಂಬಡ್ತಿ ನೀಡಿ ಗೌರವಿಸಿದೆ. ದೆಹಲಿ ಸಮಯಪುರದ ಬಡ್ಲಿ ಪೋಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಸೀಮಾ ಡಾಕಾಗೆ ಈ ಗೌರವ ದೊರೆತಿರುವುದು.
ರಕ್ಷಿಸಲಾದ ಮಕ್ಕಳಲ್ಲಿ ಐವತ್ತಕ್ಕೂ ಅಧಿಕ ಮಕ್ಕಳು ಹದಿನಾಲ್ಕು ವರ್ಷ ವಯಸ್ಸಿಗಿಂತಲೂ ಕಡಿಮೆ ಇರುವವರು. ದೆಹಲಿ, ಪಶ್ಚಿಮ ಬಂಗಾಳ, ಪಂಜಾಬ್ ಮೊದಲಾದ ರಾಜ್ಯಗಳ ಅಪ್ರಾಪ್ತರನ್ನು ಇವರು ಪತ್ತೆ ಮಾಡಿ, ಅವರವರ ಮನೆಗೆ ತಲುಪಿಸಿರುವುದು. “ತಾನೊಬ್ಬಳು ತಾಯಿಯಾಗಿದ್ದು, ಯಾರಿಗೂ ಮಕ್ಕಳನ್ನು ನಷ್ಟವಾಗಬಾರದೆನ್ನುವುದೇ ತನ್ನ ಅಭಿಲಾಷೆಯೆಂದು ಅವರು ಹೇಳುತ್ತಾರೆ.
ಮನೆಮಂದಿಯೊಂದಿಗೆ ಜಗಳವಾಡಿ, ಊರು ಬಿಟ್ಟು ಹೋಗಿ ಕುಡಿತ, ಮಾದಕದ್ರವ್ಯಗಳ ದಾಸರಾಗಿ ಮಾರ್ಪಟ್ಟ ಮಕ್ಕಳನ್ನೂ ಅವರು ರಕ್ಷಿಸಿದ್ದಾರೆ. ಕೆಲವೊಂದು ಪ್ರಕರಣಗಳು ಬಹಳ ಜಟಿಲವಾಗಿದ್ದರೂ, ಸಾಹಸೀಯವಾಗಿ ಅದನ್ನು ಸಾಧಿಸಿದ್ದಾರೆ. ಕೌನ್ಸಿಲಿಂಗ್ ಅಗತ್ಯವೆನಿಸಿದ ಮಕ್ಕಳಿಗೆ ಅದರ ವ್ಯವಸ್ಥೆಯನ್ನೂ ಮಾಡಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸೀಮಾ ಡಾಕಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ಅದರಲ್ಲಿ ದೆಹಲಿ ಕಮಿಷನ್ ಎಸ್, ಎನ್ ಶ್ರೀವಾಸ್ತವ್ ಸೇರಿದಂತೆ ಹಲವು ಅಧಿಕಾರಿಗಳೂ, ತಾರೆಯರೂ ಒಳಗೊಂಡಿದ್ದಾರೆ.