ಮಧ್ಯಪ್ರದೇಶ (10-12-2020): ಮಧ್ಯಪ್ರದೇಶದ ಛತಾರ್ಪುರದ ಹಳ್ಳಿಯೊಂದರಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಆಹಾರವನ್ನು ಸ್ಪರ್ಶಿಸಿದ ಆರೋಪದಡಿ 25 ವರ್ಷದ ದಲಿತ ಯುವಕನನ್ನು ಇಬ್ಬರು ಥಳಿಸಿಕೊಂದ ಅಮಾನವೀಯ ಘಟನೆ ವರದಿಯಾಗಿದೆ.
ದೇವರಾಜ್ ಅನುರಗಿ ಎಂದು ಗುರುತಿಸಲ್ಪಟ್ಟ ದಲಿತ ಯುವಕನನ್ನು ರಾಜ್ಯ ರಾಜಧಾನಿ ಭೋಪಾಲ್ನಿಂದ 450 ಕಿ.ಮೀ ದೂರದಲ್ಲಿರುವ ಕಿಶನ್ಪುರ ಗ್ರಾಮದಲ್ಲಿ ಥಳಿಸಿ ಕೊಲೆಗೈಯ್ಯಲಾಗಿದೆ.
ಆರೋಪಿಗಳಾದ ಸಂತೋಷ್ ಪಾಲ್ ಮತ್ತು ರೋಹಿತ್ ಸೋನಿ ಅವರು ಪಾರ್ಮ್ ನಲ್ಲಿ ಪಾರ್ಟಿಯ ನಂತರ ಸ್ವಚ್ಚಗೊಳಿಸಲು ದೇವರಾಜ್ ಅನುರಗಿಯನ್ನು ಕರೆದಿದ್ದರು. ಅಲ್ಲಿ ಸ್ವಚ್ಚತೆ ಮಾಡುವ ವೇಳೆ ಆತ ಆಹಾರವನ್ನು ಮುಟ್ಟಿದ್ದಾನೆ. ಇದರಿಂದ ಕೋಪಗೊಂಡ ಸಂತೋಷ್ ಪಾಲ್ ಮತ್ತು ರೋಹಿತ್ ಸೋನಿ 2 ಗಂಟೆಗೂ ಅಧಿಕ ಸಮಯ ಗಂಭೀರವಾಗಿ ಥಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸೌರಭ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಕಾಣೆಯಾದ ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.