ಬೆಳಗಾವಿ: ಕೇಂದ್ರದ ರೈತ ವಿರೋಧಿ ನೀತಿ ವಿರುದ್ಧ ಕಳೆದ ಹಲವಾರು ದಿನಗಳಿಂದ ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸುವ ಉದ್ದೇಶದಿಂದ ಕರ್ನಾಟಕದ ಮೂರು ಕಡೆಗಳಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ.
ಮಾ. 31 ರಂದು ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಬೃಹತ್ ರೈತ ಸಮಾವೇಶ ನಡೆಯಲಿಕ್ಕಿದೆ.
ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಆರು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ನಾಯಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದರು.
ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಅವರು ಈ ಮಾಹಿತಿ ನೀಡಿದರು.
“ಕೇಂದ್ರ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯಿದೆ, ಅಗತ್ಯ ವಸ್ತುಗಳ ಕಾಯಿದೆ, ಎಪಿಎಂಸಿ, ವಿದ್ಯುತ್ ಕಾಯಿದೆ ಮತ್ತು ಕೃಷಿ ಗುತ್ತಿಗೆ ಪದ್ಧತಿ ಕಾಯಿದೆ ವಿರೋಧಿಸಿ 2020ರ ಆಗಸ್ಟ್ನಿಂದಲೇ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ಆರಂಭಗೊಂಡಿದೆ. ಲಕ್ಷಾಂತರ ರೈತರು ಚಳವಳಿಯಲ್ಲಿ ಪಾಲ್ಗೊಂಡಿದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ಪಂದಿಸುತ್ತಿಲ್ಲ. ಇದೇ ಕಾರಣದಿಂದ ಉತ್ತರ ಭಾರತದಲ್ಲಿ ನಡೆದಿರುವ ಹೋರಾಟವನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದ್ದು ಶಿವಮೊಗ್ಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.