ಚೆನ್ನೈ(25-11-2020): ನಿವಾರ್ ಚಂಡಮಾರುತ ತಮಿಳುನಾಡು ಮತ್ತು ಪುದುಚೇರಿ ತೀರಗಳನ್ನು ಇಂದು ಮಧ್ಯರಾತ್ರಿ ಅಥವಾ ಗುರುವಾರ ಮುಂಜಾನೆ ದಾಟಲಿದೆ ಎಂದು ಭಾರತದ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ.
ಕಳೆದ ಆರು ಗಂಟೆಗಳಲ್ಲಿ ಸುಮಾರು 7 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಪ್ರಬಲ ಚಂಡಮಾರುತ ನಿವಾರ್, ಕಡಲೂರಿನ ಪೂರ್ವ-ಆಗ್ನೇಯಕ್ಕೆ 290 ಕಿ.ಮೀ, ಪುದುಚೇರಿಯ ಪೂರ್ವ-ಆಗ್ನೇಯಕ್ಕೆ 300 ಕಿ.ಮೀ ಮತ್ತು ಚೆನ್ನೈಗೆ 350 ಕಿ.ಮೀ ಆಗ್ನೇಯಕ್ಕೆ ಕೇಂದ್ರೀಕೃತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಂಟೆಗೆ 145 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದೆ.
ಮುಂದಿನ 12 ಗಂಟೆಗಳಲ್ಲಿ, ನಿವಾರ್ ಅತ್ಯಂತ ತೀವ್ರವಾಗಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನಿವಾರ್ ವಾಯುವ್ಯ ದಿಕ್ಕಿಗೆ ತೆರಳಿ ತಮಿಳುನಾಡು ಮತ್ತು ಪುದುಚೇರಿ ತೀರ ಮಾಮಲ್ಲಾಪುರಂ ಮತ್ತು ಕಾರೈಕಲ್ ನಡುವೆ ನವೆಂಬರ್ 25 ಮತ್ತು 26 ರ ಮಧ್ಯದ ರಾತ್ರಿ ಹಾದುಹೋಗುವ ಸಾಧ್ಯತೆ ಇದೆ.
ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದಲ್ಲಿ ನವೆಂಬರ್ 25ಕ್ಕೆ ಮತ್ತು 26ಕ್ಕೆ ಆಗ್ನೇಯ ತೆಲಂಗಾಣದಲ್ಲಿ ವ್ಯಾಪಕ ಗುಡುಗು ಸಹಿತ ಮಳೆ ಬೀಳಲಿವೆ.