ನವದೆಹಲಿ(22-01 -2021): ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರ ವಾಟ್ಸಾಪ್ ಚಾಟ್ ಸೋರಿಕೆ ಕುರಿತು ಕೇಂದ್ರದ ಮೇಲೆ ತೀವ್ರ ದಾಳಿ ನಡೆಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮುಖ್ಯಸ್ಥೆ ಸೋನಿಯಾಗಾಂಧಿ , ಇದು ಸೂಕ್ಷ್ಮ ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಗೌಪ್ಯತೆಯ ಉಲ್ಲಂಘನೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ನಿಸ್ಸಂದೇಹವಾಗಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟುಮಾಡಲಾಗಿದೆ. ಕೆಟ್ಟ ಸಂಭಾಷಣೆಗಳ ಬಹಿರಂಗದ ಬಗ್ಗೆ ಸಿಡಬ್ಲ್ಯೂಸಿ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ. ಸರ್ಕಾರದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು, ಪ್ರಮುಖ ಮತ್ತು ಸೂಕ್ಷ್ಮ ಮಿಲಿಟರಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಗೌಪ್ಯತೆಯ ಉಲ್ಲಂಘನೆ ಕಂಡುಬಂದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಸಿಡಬ್ಲ್ಯೂಸಿ ಪತ್ರವೊಂದರಲ್ಲಿ ತಿಳಿಸಿದೆ.
ಇದು ಉದ್ದೇಶಪೂರ್ವಕ ವಿಧ್ವಂಸಕತೆ, ಈ ಬೆಳವಣಿಗೆ ಸರ್ಕಾರದ ಭ್ರಷ್ಟತೆ ಮತ್ತು ಬಾಹ್ಯ ಪ್ರಭಾವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಸರ್ಕಾರೇತರ ಸಂಸ್ಥೆಗಳೊಂದಿಗೆ ಮೋದಿ ಸರಕಾರದ ನಾಚಿಕೆಗೇಡಿನ ರಾಜಿ ಬಹಿರಂಗಗೊಂಡಿದೆ ಎಂದು ಸಿಡಬ್ಲ್ಯೂಸಿ ಹೇಳಿದೆ.