ತುಮಕೂರು(02-10-2020): ಸಿಟಿ ರವಿಗೆ ಎರಡು ಹುದ್ದೆ ಬೆನ್ನಲ್ಲೇ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ಪ್ರಾರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ ನಮ್ಮ ಪಕ್ಷದಲ್ಲಿ ಒಬ್ಬರಿಗೆ ಒಂದೇ ಸ್ಥಾನ ನಿಯಮವಿರುವುದರಿಂದ ಸಿ.ಟಿ ರವಿ ಸ್ವಯಂ ಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದು, ಸಚಿವ ಸ್ಥಾನಕ್ಕೆ ಸಿಟಿ ರವಿ ರಾಜೀನಾಮೆ ಕೊಡುವಂತೆ ಪರೋಕ್ಷವಾಗಿ ಆಗ್ರಹಿಸಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಎಂಬ ಪಕ್ಷದ ಅಲಿಖಿತ ನಿಯಮವನ್ನು ವರಿಷ್ಠರು ಬದಲಿಸಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಹಾಗೂ ಸಚಿವ ಸ್ಥಾನ ಎರಡನ್ನೂ ನಿಭಾಯಿಸುವ ಸಾಮರ್ಥ್ಯವಿದೆ ಎಂದು ಪರೋಕ್ಷವಾಗಿ ಸಿ.ಟಿ ರವಿ ಹೇಳಿಕೆ ಕೊಟ್ಟಿದ್ದರು. ಇದು ಬಿಜೆಪಿಗರಲ್ಲೇ ಅಸಮಾಧಾನಕ್ಕೆ ಕಾರಣವಾಗಿತ್ತು.
ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೂಡ ಭಾರೀ ಚರ್ಚೆ ನಡೆದಿತ್ತು. ಬಿಜೆಪಿ ಶಾಸಕರು ಸಂಪುಟಕ್ಕೆ ಸೇರಲು ಕಸರತ್ತು ಮಾಡುತ್ತಿದ್ದರು. ಈ ಮಧ್ಯೆ ವಿಧಾನ ಪರಿಷತ್ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ನಿರ್ಧಾರವನ್ನು ಬಿಎಸ್ ವೈ ಮುಂದೂಡಿದ್ದಾರೆ.