ಬೆಂಗಳೂರು(11-12-2020): ಮೋದಿ ಸರ್ಕಾರ ಬಂದ ಮೇಲೆ ದನದ ಮಾಂಸ ರಫ್ತು ಹೆಚ್ಚಳವಾಗಿದೆ. ಸರಕಾರದ ನಡೆಯಿಂದ ಸಣ್ಣ ರೈತರು, ಕೂಲಿ ಕಾರ್ಮಿಕರಿಗೆ, ಚರ್ಮ ಸುಲಿಯುವ ಕೆಲಸವನ್ನು ಮಾಡುವ ಪರಿಶಿಷ್ಟ ಜಾತಿಯ ಜನರಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ರೈತರ ಆರ್ಥಿಕತೆ ಮತ್ತು ರಾಜ್ಯದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ.ಸರ್ಕಾರವೇ ದುಡ್ಡು ಕೊಟ್ಟು ಗೋ ಶಾಲೆಗಳನ್ನು ನಡೆಸಬೇಕಾಗುತ್ತದೆ. ಸರ್ಕಾರ ಗೋವುಗಳನ್ನು ಗೋಶಾಲೆಯಲ್ಲಿ ಸಾಕುತ್ತಾ? ಇದು ಸರಕಾರಕ್ಕೆ ಹೊರೆಯಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಗೋ ಹತ್ಯೆ ನಿಷೇಧದಿಂದ ಚರ್ಮ ಉದ್ಯಮದ ಮೇಲೆ ಪ್ರಭಾವ ಬೀರಲಿದೆ. 25 ಲಕ್ಷ ಎಸ್ಸಿ-ಎಸ್ಟಿ ಕುಟುಂಬಗಳು ಚರ್ಮೋದ್ಯೋಗದಲ್ಲಿದ್ದಾರೆ. ಸುಮಾರು 8 ಲಕ್ಷ ಪರಿಶಿಷ್ಟ ಜಾತಿಯ ಜನರು ಚರ್ಮ ಸುಲಿಯುವ ಕೆಲಸ ಮಾಡುತ್ತಾರೆ. ವಯಸ್ಸಾದ ಹಸುಗಳ ಸಾಕಾಣಿಗೆ ಸಮಸ್ಯೆಯಾಗಲಿದೆ. ಮಹಿಳೆಯರು ಹೈನುಗಾರಿಕೆ ಮೇಲೆ ಅವಲಂಬಿತರಾಗಿದ್ದಾರೆ. ಈಗ ನಿಷೇಧ ಮಾಡಿದರೆ ಬಹಳಷ್ಟು ನಷ್ಟವಾಗಲಿದೆ ಎಂದು ಹೇಳಿದರು.
ಚರ್ಮೋದ್ಯೋಗದಿಂದ 5.5 ಬಿಲಿಯನ್ ಡಾಲರ್ಸ್ ಜಿಡಿಪಿ ಆದಾಯ ಇದೆ. ಚರ್ಮೋದ್ಯೋಗದಲ್ಲಿ ನಮ್ಮ ದೇಶ ಎರಡನೇ ಸ್ಥಾನದಲ್ಲಿದೆ. ಚರ್ಮದ ಉತ್ಪನ್ನಗಳ ಮೇಲೆ ಸಾಕಷ್ಟು ಮಂದಿ ಅವಲಂಬಿತರಾಗಿದ್ದಾರೆ. ಗೋಹತ್ಯೆ ನಿಷೇಧದಿಂದ ನಿರುದ್ಯೋಗ ಹೆಚ್ಚುತ್ತದೆ ಎಂದು ಹೇಳಿದ್ದಾರೆ. ಅನುತ್ಪಾದಕ ಗೋವುಗಳನ್ನು ಸರ್ಕಾರವೇ ಕೊಂಡುಕೊಳ್ಳಲಿ. ಜನಸಾಮಾನ್ಯರ ಮೇಲೆ ಏಕೆ ಹೊರೆ ಹಾಕುತ್ತೀರಿ. ಬಿಜೆಪಿ ಬೆಂಬಲಿಗರೇ ಗೋಮಾಂಸ ರಫ್ತು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.