ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡ ಅನಾಥರಿಗೆ ‘ಬಾಲ ಸೇವಾ ಯೋಜನೆ’ : ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳು ಇದ್ದಾರೆ. ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ರಾಜ್ಯ ಸರ್ಕಾರ ಮಹತ್ವದ ಯೋಜನೆ ಘೋಷಣೆ ಮಾಡಿದೆ.

ಇಂದು ಸಂಜೆ ಗೃಹ ಕಛೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‘ಬಾಲ ಸೇವಾ ಯೋಜನೆ’ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ಸಲಹೆ ಮೇರೆಗೆ, ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಕೋವಿಡ್ ನಿಂದಾಗಿ ಹೆತ್ತವರನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ಯನ್ನು ಜಾರಿಗೆ ತರಲಿದೆ; ಕೇಂದ್ರ ಸರ್ಕಾರದ ಸಲಹೆ ಮೇರೆಗೆ, ಕೊರೋನಾದಿಂದ ಅನಾಥರಾಗಿ, ವಿಸ್ತೃತ ಕುಟುಂಬದ ಆಶ್ರಯದಲ್ಲಿರುವ, ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ದೃಷ್ಟಿಯಿಂದ, ತಿಂಗಳಿಗೆ 3,500 ರೂ. ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ವಿಸ್ತೃತ ಕುಟುಂಬದ ಆಸರೆಯಿಲ್ಲದ, 10 ವರ್ಷದೊಳಗಿನ ಕೋವಿಡ್ ನಿಂದಾಗಿ ಅನಾಥರಾಗಿರುವ ಮಕ್ಕಳ ಪೋಷಣೆ ಮತ್ತು ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರ್ಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ನೀಡಲಾಗುವುದು ಎಂದು ಹೇಳಿದ್ದಾರೆ.

21 ವರ್ಷ ತುಂಬಿರುವ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಸೇರಿದಂತೆ ಮುಂದಿನ ಜೀವನಕ್ಕೆ ಅನುಕೂಲ ಕಲ್ಪಿಸಲು 1 ಲಕ್ಷ ರೂ. ನೆರವು ನೀಡಲಾಗುವುದು. ರಕ್ಷಣೆಗೆ ಯಾರೂ ಇಲ್ಲದಂತಹ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರದಿಂದ ಮಾರ್ಗದರ್ಶಿ/ಹಿತೈಷಿಗಳನ್ನು ನೇಮಿಸಲಾಗುವುದು. ಯೋಜನೆಯ ಸಮಗ್ರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಸಿಎಂ ಬಿ.ಎಸ್.ವೈ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು