ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ: ರಾಹುಲ್ ಗಾಂಧಿ ಆರೋಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಮೋದಿ ಸರ್ಕಾರ ರಾಜ್ಯ ಸರ್ಕಾರಗಳ ಕೈಕಟ್ಟಿಹಾಕಿದ್ದು, ಅವರನ್ನು ಅಸಮರ್ಥರನ್ನಾಗಿ ಮಾಡಿ ಆನಂತರ ಅವರ ಸಮಸ್ಯೆ ಅವರೇ ಬಗೆಹರಿಸಿಕೊಳ್ಳುವಂತೆ ಹೇಳುತ್ತಿದೆ. ಇದರಿಂದ ಸಹಜವಾಗಿ ವ್ಯವಸ್ಥೆ ಹದಗೆಡುವಂತೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಆರಂಭದ ದಿನದಿಂದಲೂ ಕಾಂಗ್ರೆಸ್ ಸರ್ಕಾರದ ಜತೆ ಕೈಜೋಡಿಸಿ ಕೆಲಸ ಮಾಡಲು ಸಿದ್ಧವಿದೆ ಎಂದು ಹೇಳುತ್ತಲೇ ಬಂದಿದೆ. ಈ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜತೆ ಕೆಲಸ ಮಾಡಲು ಯಾವುದೇ ವಿರೋಧಾಭಾಸವಿಲ್ಲ. ಜತೆಗೆ ಈ ಪರಿಸ್ಥಿತಿಯಲ್ಲಿ ಸರ್ಕಾರ ತನ್ನ ನಿರ್ಧಾರಗಳಿಗೆ ತಾನೇ ಹೊಣೆ ಹೊರಬೇಕು ಎಂದಿದ್ದಾರೆ.

ಕಳೆದೊಂದು ವರ್ಷದಲ್ಲಿ ಬಿಜೆಪಿ ಸರ್ಕಾರ ಪರೀಕ್ಷೆ, ಆಕ್ಸಿಜನ್, ಹಾಸಿಗೆ ಮತ್ತು ವೆಂಟಿಲೇಟರ್ ಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದಿತ್ತು. ಸರ್ಕಾರ ತಜ್ಞರ ಸಲಹೆಯನ್ನು ಪಾಲಿಸಲಿಲ್ಲ. ಕಳೆದ ಕೆಲವು ತಿಂಗಳಿಂನಿಂದ ನಮ್ಮ ಪ್ರಧಾನಿಗಳು ಹಾಗೂ ಗೃಹಮಂತ್ರಿಗಳು ಸಾರ್ವಜನಿಕ ಸಭೆಗಳಲ್ಲಿ ಮಾಸ್ಕ್ ಗಳನ್ನೂ ಧರಿಸಲಿಲ್ಲ. ಇದು ನಿಜವಲ್ಲವೇ?” ಎಂದು ಪ್ರಶ್ನಿಸಿದರು.

ದೇಶದಲ್ಲಿ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಪರಿಣಾಮವಾಗಿ ಜನ ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್ ಸಿಗದೇ ಸಾಯುತ್ತಿದ್ದಾರೆ. ಈ ದುರಂತವನ್ನು ಇಡೀ ವಿಶ್ವವೇ ನೋಡುತ್ತಿದ್ದು, ಈ ಸಮಯದಲ್ಲಿ ಜನರಿಗೆ ಸಹಾಯ ಮಾಡಿ ಸಮಸ್ಯೆ ಬಗೆಹರಿಸಬೇಕು. ಎಲ್ಲವೂ ತನ್ನ ನಿಯಂತ್ರಣದಲ್ಲೇ ಇರಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಏಕಪಕ್ಷೀಯ ಧೋರಣೆಯಿಂದ ಕೊರೋನಾ ಸಮಯದಲ್ಲಿ ದೇಶ ದೊಡ್ಡ ಬೆಲೆ ತೆರುವಂತಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಲಸಿಕೆ ಅಭಿಯಾನವು ರಿಯಾಯಿತಿ ಮಾರಾಟ ಮೇಳವಾಗಿದೆ. ಮೊದಲು ಒಂದು ದರ ನಿಗದಿ ಮಾಡಿ ಆಮೇಲೆ ಅದನ್ನು ಕಡಿಮೆ ಮಾಡುವಂತೆ ನಂಬಿಸುವ ಪ್ರಯತ್ನ ಮಾಡುತ್ತಿದೆ. ಕೇಂದ್ರಕ್ಕೆ ಒಂದು ದರ, ರಾಜ್ಯ ಸರ್ಕಾರಕ್ಕೆ ಒಂದು ದರ, ಖಾಸಗಿ ಆಸ್ಪತ್ರೆಯವರಿಗೆ ಒಂದು ದರ ಯಾಕೆ? ಸದ್ಯ ನಮ್ಮ ಬಳಿ ಇರುವ ಏಕೈಕ ಪರಿಹಾರ ಎಂದರೆ ಲಸಿಕೆ. ನಾವು ಅತಿ ದೊಡ್ಡ ಲಸಿಕಾ ಉತ್ಪಾದಕರಾಗಿದ್ದೇವೆ. ಆದರೂ ನಮ್ಮ ದೇಶದ ಜನರು ಮೊದಲು ಈ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಏಕೆ? ಇದು ಯೋಜನೆ ಹಾಗೂ ಅದರ ಜಾರಿಗೊಳಿಸುವ ವೈಫಲ್ಯವಲ್ಲದೇ ಮತ್ತೇನು?

ಮೋದಿ ಸರ್ಕಾರ 18 ರಿಂದ 44 ವರ್ಷದವರಿಗೆ ತಮ್ಮ ಲಸಿಕೆ ಪಡೆಯಲು ನಿರಾಕರಿಸಿದ್ದು ಏಕೆ? ಒಂದೇ ಕೋವಿಡ್ ಲಸಿಕೆಗೆ ಐದು ವಿಭಿನ್ನ ದರಗಳನ್ನು ನಿಗಧಿ ಮಾಡಿರುವುದೇಕೆ? ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು