ಮಾಸ್ಕೋ(11-11-2020): ರಷ್ಯಾ ನಿರ್ಮಿತ ಕೊರೋನಾ ವ್ಯಾಕ್ಸಿನ್ ತೊಂಭತ್ತೆರಡು ಶೇಕಡಾ ಪರಿಣಾಮಕಾರಿಯೆಂಬ ಸುದ್ದಿ ಬಂದಿದೆ. “ಸ್ಪುಟ್ನಿಕ್ ವಿ” ಎಂಬ ಕರೆಯಲಾಗುವ ಈ ವಾಕ್ಸಿನಿನ ಡೋಸುಗಳನ್ನು 16000 ಮಂದಿಗೆ ನೀಡಲಾಗಿತ್ತು. ಅವರ ದೇಹದ ಆರೋಗ್ಯ ಸ್ಥಿತಿಗತಿಗಳನ್ನು ಪರೀಕ್ಷಿಸಿ, ಅಧ್ಯಯನಕ್ಕೊಳಪಡಿಸಿದಾಗ ಈ ಸಕಾರಾತ್ಮಕ ಫಲಿತಾಂಶ ಸಿಕ್ಕಿತೆಂದು ವರದಿಯಾಗಿದೆ. ಈ ಹದಿನಾರು ಸಾವಿರ ಮಂದಿಗೆ ಕೊರೋನಾ ವಾಕ್ಸಿನಿನ ಎರಡು ಡೋಸುಗಳನ್ನು ಎರಡು ಹಂತಗಳಲ್ಲಿ ನೀಡಲಾಗಿತ್ತು.
ಗಮಲೆಯ ರಿಸರ್ವ್ ಇನ್ಸ್ಟಿಟ್ಯೂಶನ್ ಮತ್ತು ರಷ್ಯಾದ ರಕ್ಷಣಾ ಇಲಾಖೆಗಳು ಜೊತೆಗೂಡಿ ಈ ವ್ಯಾಕ್ಸಿನನ್ನು ಅಭಿವೃದ್ಧಿ ಪಡಿಸಿದೆ. ಅದರ ಪರೀಕ್ಷೆಯ ಎರಡೂ ಹಂತಗಳನ್ನು ದಾಟಿ ಈಗ ಮೂರನೆಯ ಅಂದರೆ ಕೊನೆಯ ಹಂತದ ಪರೀಕ್ಷೆಗೆ ಒಳಪಡಿಸಲು ತಯಾರಿ ನಡೆಸಲಾಗುತ್ತಿದೆ. ಮೂರನೆಯ ಹಂತದಲ್ಲಿ 40,000 ಸ್ವಯಂ ಸೇವಕರು ಭಾಗಿಯಾಗುತ್ತಾರೆನ್ನಲಾಗಿದೆ.
‘ಸ್ಪುಟ್ನಿಕ್ ವಿ’ ಚುಚ್ಚುಮದ್ದು ತೆಗೆದುಕೊಂಡವರಿಗೆ ಕೊರೋನಾ ಸೋಂಕಿಗೊಳಗಾಗುವ ಅಪಾಯ 92 ಶೇಕಡಾ ಕಡಿಮೆಯೆಂದು ರಷ್ಯಾದ ಆರೋಗ್ಯ ಇಲಾಖೆ ತಿಳಿಸಿದೆ. ಇದುವರೆಗೆ ಅಭಿವೃದ್ಧಿ ಪಡಿಸಲಾದ ಕೋವಿಡ್ ವಾಕ್ಸಿನುಗಳಲ್ಲೇ ನಮ್ಮದು ಅತೀ ಹೆಚ್ಚು ಪರಿಣಾಮಕಾರಿಯಾದುದು. ಅಧ್ಯಯನದಿಂದ ದೊರೆತ ಅಂಕಿಅಂಶಗಳು ಇದನ್ನೇ ಸೂಚಿಸುತ್ತಿವೆ ಎಂದು ಆರ್ಡಿಎಫ್ ನ ಉನ್ನತ ತಜ್ಞ ಕಿರಿಲ್ ಡಿಮಿಟ್ರಿವ್ ಹೇಳುತ್ತಾರೆ.
ಪರೀಕ್ಷೆಗೊಳಗಾಗಲು ಯಾರನ್ನೂ ವಿಶೇಷವಾಗಿ ಆಯ್ಕೆ ಮಾಡಿಕೊಳ್ಳದೇ, ಸಾಮಾನ್ಯ ರೀತಿಯಲ್ಲಿ, ಪಾರದರ್ಶಕವಾಗಿ ಇದರ ಪರೀಕ್ಷೆ ನಡೆಸಲಾಯಿತು. ಆದರೂ ಉತ್ತಮ ಫಲಿತಾಂಶ ನೀಡಿದೆ. ಮತ್ತು ವಾಕ್ಸಿನನ್ನು ತೆಗೆದುಕೊಂಡವರಿಗೆ, ಇದು ಕೊರೋನಾದ ವ್ಯಾಕ್ಸಿನ್ ಎಂಬ ಮಾಹಿತಿಯನ್ನು ಮೊದಲೇ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.