ಬೆಂಗಳೂರು(19-01-2021): ದೇಶಾದ್ಯಂತ ಇದುವರೆಗೆ 3,81,305 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, ಲಸಿಕೆ ಕೊಟ್ಟ ನಂತರದ 580 ಪ್ರತಿಕೂಲ ಘಟನೆಗಳು ನಿನ್ನೆ ವೇಳೆಗೆ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಪೈಕಿ ಕರ್ನಾಟಕದ 43 ವರ್ಷದ ಆರೋಗ್ಯ ಇಲಾಖೆಯ ಉದ್ಯೋಗಿಯೊಬ್ಬರು ಕೋವಿಡ್ -19 ಲಸಿಕೆ ನೀಡಿದ ಎರಡು ದಿನಗಳ ನಂತರ ಸೋಮವಾರ ಹೃದಯಾಘಾತದಿಂದ ನಿಧನರಾದರು. ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯ ವಾರ್ಡ್ ಬಾಯ್ ಸೋಮವಾರ ಲಸಿಕೆ ನೀಡಿದ 30 ಗಂಟೆಗಳ ನಂತರ ಸಾವನ್ನಪ್ಪಿದ್ದಾನೆ.
ಮೃತ ಕರ್ನಾಟಕ ಆರೋಗ್ಯ ಇಲಾಖೆ ನೌಕರನನ್ನು ಬಲ್ಲಾರಿ ಜಿಲ್ಲೆಯ ನಾಗರಾಜು ಎಂದು ಗುರುತಿಸಲಾಗಿದೆ. ಅವರು ಆರೋಗ್ಯ ಇಲಾಖೆಯ ಖಾಯಂ ಉದ್ಯೋಗಿಯಾಗಿದ್ದರು. ಜನವರಿ 16 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಸಿಕೆ ನೀಡಲಾಗಿದ್ದು, ಇಂದು ಬೆಳಿಗ್ಗೆ ತನಕ ಅವರು ಸಾಮಾನ್ಯರಾಗಿದ್ದರು ಎಂದು ಇಲಾಖೆ ತಿಳಿಸಿದೆ.
ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ, ನಾಗರಾಜ್ ಅವರದ್ದು ಸಹಜ ಸಾವು ಮತ್ತು ಲಸಿಕೆಗೆ ಸಂಬಂಧಿಸಿಲ್ಲ ಎಂದು ಹೇಳಿದರು.
ಡಾ.ಮಂಜುನಾಥ್ ಅವರು ಕೋವಿಡ್ -19 ಕರ್ನಾಟಕ ಸರ್ಕಾರದ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.