ಕೊಲ್ಕತ್ತಾ(20-12-2020): ಕೊರೋನಾ ವ್ಯಾಕ್ಸಿನ್ ಬಂದ ಬಳಿಕ ಎನ್ ಆರ್ ಸಿ ಜಾರಿಗೊಳಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಎರಡು ದಿನಗಳಿಗಾಗಿ ಪಶ್ಚಿಮ ಬಂಗಾಳ ಭೇಟಿಯಲ್ಲಿರುವ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.
ಕೊರೋನಾ ಕಾರಣದಿಂದಾಗಿ ಎನ್ ಆರ್ ಸಿ ಸಂಬಂಧಿತ ವಿಚಾರಗಳಲ್ಲಿ ಮುಂದುವರಿಯಲು ಸಾಧ್ಯವಾಗಿರಲಿಲ್ಲ. ಕೊರೋನಾಕ್ಕಿರುವ ವ್ಯಾಕ್ಸಿನ್ ಬಂದ ಬಳಿಕ ಎನ್ ಆರ್ ಸಿ ಯನ್ನು ಜಾರಿಗೊಳಿಸಲಾಗುವುದು ಎಂದಿದ್ದಾರೆ.
ಬಾಂಗ್ಲಾದೇಶದಿಂದ ಬಂದ ನುಸುಳುಕೋರರನ್ನು ಸಂಪೂರ್ಣವಾಗಿ ಹೊರದಬ್ಬಲು ಪಶ್ಚಿಮ ಬಂಗಾಳದ ಜನರು ಇಚ್ಛಿಸುತ್ತಿದ್ದಾರೆ. ಅವಕಾಶ ಸಿಕ್ಕರೆ ಐದೇ ವರ್ಷಗಳಲ್ಲಿ ಸುವರ್ಣ ಬಂಗಾಳದ ನಿರ್ಮಾಣ ಮಾಡಲಾಗುವುದು ಎಂದೂ ಅವರು ಹೇಳಿದ್ದಾರೆ.
ಚುನಾವಣೆಗೆ ಮೂರು ತಿಂಗಳು ಬಾಕಿಯಿರುವಂತೆಯೇ ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಸಕ್ರಿಯವಾಗಿದ್ದು, ಇದರ ಭಾಗವಾಗಿಯೇ ಎನ್ ಆರ್ ಸಿ, ಅಕ್ರಮ ನುಸುಳುವಿಕೆ ಮುಂತಾದ ದಾಳಗಳನ್ನು ಬಳಸುತ್ತಿದ್ದಾರೆ. ಜೊತೆಗೆ ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ವಿರುದ್ಧವೂ ನಿರಂತರ ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ.
ಶನಿವಾರವಷ್ಟೇ ಅಮಿತ್ ಶಾ ಭಾಗವಹಿಸಿದ್ಧ ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ಸಿನಿಂದ ಮಾಜಿ ಸಚಿವ, ಎಮ್ ಎಲ್ ಎ, ಎಂ ಪಿ ಸೇರಿದಂತೆ ಹತ್ತು ಮಂದಿ ಬಿಜೆಪಿ ಸೇರಿದ್ದಾರೆ.