ಕೊರೊನಾ ಪರೀಕ್ಷೆ ಬಗ್ಗೆ ಸುಳ್ಳು ಭರವಸೆಯನ್ನು ಜನರಲ್ಲಿ ಬಿತ್ತುವ ರಾಜ್ಯ ಸರ್ಕಾರದ ನಿರ್ಧಾರ ಕೊಲೆಗಡುಕತನದ್ದು: ಸಿದ್ದರಾಮಯ್ಯ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೊರೊನಾ ಪರೀಕ್ಷೆ ಕಡಿಮೆಮಾಡಿ, ಸೋಂಕು ಇಳಿಮುಖವಾಗುತ್ತಿದೆ ಎಂಬ ಸುಳ್ಳು ಭರವಸೆಯನ್ನು ಜನರಲ್ಲಿ ಬಿತ್ತುವ ರಾಜ್ಯ ಸರ್ಕಾರದ ನಿರ್ಧಾರ ಕೊಲೆಗಡುಕತನದ್ದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವ ಕೆ. ಸುಧಾಕರ್ ಸುಳ್ಳುಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರ ಈ ಸುತ್ತೋಲೆ ಸಾಕ್ಷಿ.
ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸುಳ್ಳು ಪ್ರಚಾರಕ್ಕೆ ರೋಗ ಲಕ್ಷಣಗಳಿಲ್ಲದವರ ( ಅಸಿಂಪ್ಟಾಮ್ಯಾಟಿಕ್ಸ್) ಸೋಂಕು ಪರೀಕ್ಷೆ ಮಾಡಲೇ ಬಾರದು ಎನ್ನುವ ರಾಜ್ಯ ಸರ್ಕಾರದ ಸುತ್ತೋಲೆ ಕಾರಣ. ಇದರಿಂದಾಗುವ ಅಪಾಯ ಗೊತ್ತೇ ಮುಖ್ಯಮಂತ್ರಿಗಳೇ? ಎಂದಿದ್ದಾರೆ.

ರೋಗ ಲಕ್ಷಣಗಳಿಲ್ಲ ಎನ್ನುವ ಕಾರಣಕ್ಕೆ ಪರೀಕ್ಷೆ ಮಾಡದಿರುವ ಒಬ್ಬ ಸೋಂಕಿತ ವ್ಯಕ್ತಿ ತನ್ನ ಸಂಪರ್ಕಕ್ಕೆ ಬರುವ ನಾಲ್ಕಾರು ಮಂದಿಗೆ‌ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಲಾಕ್ ಡೌನ್ ಹೊರತಾಗಿಯೂ ಕೊರೊನಾ ನಿಯಂತ್ರಣಕ್ಕೆ ಬರದೆ ಇರಲು ರಾಜ್ಯ ಸರ್ಕಾರದ ಈ ಮೂರ್ಖ ನಿರ್ಧಾರ ಕಾರಣ. ಮೇ ಮೊದಲ ವಾರದಲ್ಲಿ 49,000ದಷ್ಟಿದ್ದ
ಕೊರೊನಾ ಸೋಂಕಿತರ ಸಂಖ್ಯೆ, ಲಾಕ್‌ಡೌನ್ ಹೇರಿದ ಕೆಲವೇ ದಿನಗಳಲ್ಲಿ 38,000ಕ್ಕೆ ಇಳಿಯಿತು ಎಂದು ಮುಖ್ಯಮಂತ್ರಿಗಳು ಕೊಚ್ಚಿಕೊಂಡರು. ಆದರೆ, ಏಪ್ರಿಲ್ ಒಂದರಂದು ನಡೆದಿದ್ದ 1,77,560 ಕೊರೊನಾ ಪರೀಕ್ಷೆ,
ಮೇ 17ಕ್ಕೆ 97000ಕ್ಕೆ ಕುಸಿದಿರುವುದನ್ನು‌ ಮಾತ್ರ ಅವರು ಹೇಳಿಲ್ಲ ಎಂದು ಹೇಳಿದ್ದಾರೆ.

ಸುಳ್ಳು ಲೆಕ್ಕದಿಂದ ಜನರ ದಾರಿತಪ್ಪಿಸುವ ಕೀಳುಬುದ್ದಿಯನ್ನು ಬಿಟ್ಟು, ತಕ್ಷಣ ಮುಖ್ಯಮಂತ್ರಿ ಅವರು ರೋಗಲಕ್ಷಣಗಳಿಲ್ಲದವರ ಕೊರೊನಾ ಪರೀಕ್ಷೆ‌ ಮಾಡುವ ಅಭಿಯಾನವನ್ನು ಪುನರಾರಂಭಿಸಬೇಕೆಂದು‌ ಒತ್ತಾಯಿಸುತ್ತೇನೆ. ಕೊರೊನಾವನ್ನು‌ ಔಷದಿ-ಚಿಕಿತ್ಸೆಯ ಮೂಲಕ ಎದುರಿಸಬೇಕೇ ಹೊರತು ಸುಳ್ಳು – ಮೋಸಗಳ ಫೇಕುಗಿರಿಯಿಂದ ಅಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು