ತಿರುವನಂತಪುರಂ(29-11-2020): ತಿರುವನಂತಪುರಂನ ನಯ್ಯಾರ್ದಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಬಂದ ತಂದೆ ಮತ್ತು ಮಗಳ ಜೊತೆ ಅಧಿಕಾರಿ ಕೆಟ್ಟದಾಗಿ ವರ್ತಿಸುತ್ತಿರುವುದು ವೈರಲ್ ಆಗಿದೆ.
ಗ್ರೇಡ್ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಗೋಪಾಕುಮಾರ್ ಗೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ನವೆಂಬರ್ 24 ರಂದು ತಿರುವನಂತಪುರಂ ನಿವಾಸಿ ಸುದೇವನ್ ಮತ್ತು ಅವರ ಮಗಳು ತನ್ನ ಮತ್ತೋರ್ವ ಮಗಳು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಲು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು. ಅಮಾನತು ಆದೇಶದ ಪ್ರಕಾರ, ಎಎಸ್ಐ ಗೋಪಾಕುಮಾರ್ ಅವರು ದೂರುದಾರರಲ್ಲಿ ಅಮಾನವೀಯವಾಗಿ ವರ್ತಿಸಿದ್ದು, ಅದರ ನಂತರ ಇವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಸುದೇವನ್ ಈ ಘಟನೆಯನ್ನು ತನ್ನ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ, ಪೊಲೀಸ್ ಅಧಿಕಾರಿ, ಪೊಲೀಸ್ ಠಾಣೆ ಮುಂದೆ ನಿಂತು ತಂದೆ ಮತ್ತು ಮಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಾಣಬಹುದು. ವಿಡಿಯೋ ಚಿತ್ರೀಕರಿಸಿದ ಸುದೇವನ್ (ದೂರುದಾರ), ದೂರುಗಳೊಂದಿಗೆ ಬರುವ ಜನರಿಗೆ ಪೊಲೀಸರು ಬೆದರಿಕೆ ಹಾಕುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸುವುದನ್ನು ಕೇಳಬಹುದು.
ಪೊಲೀಸ್ ಅಧಿಕಾರಿ ಕೆಟ್ಟದಾಗಿ ವರ್ತಿಸುತ್ತಿರುವುದರಿಂದ ಸುದೇವನ್ ಅವರ ಮಗಳು ತನ್ನ ತಂದೆಯನ್ನು ಹೊರಹೋಗುವಂತೆ ಕೇಳಿಕೊಳ್ಳುತ್ತಿದ್ದಳು. ಒಂದು ಹಂತದಲ್ಲಿ, ಅಧಿಕಾರಿಯು ಮಹಿಳೆಯ ವಿರುದ್ಧ ನಿಂದನೀಯ ಪದಗಳನ್ನು ಬಳಸುವುದು ಕೇಳಬಹುದು, ಅವರು ವೀಡಿಯೊದಲ್ಲಿ ಅಳುವುದು ದಾಖಲಾಗಿತ್ತು.