ಉತ್ತರಪ್ರದೇಶ (28-12-2020): ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹಸಿವಿನಿಂದ ಗೋವುಗಳು, ಸಾಲದಿಂದ ರೈತರು ಸಾಯುತ್ತಿದ್ದಾರೆಂದು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸೇರಿ 60ಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸುತ್ತಿದ್ದಾಗ ಯುಪಿ ಪೊಲೀಸರು ಬಂದಿಸಿದ್ದಾರೆ.
“ಗಾಯಿ ಬಚಾವೊ, ಕಿಸಾನ್ ಬಚಾವೊ ಯಾತ್ರೆ” ಸಂದರ್ಭದಲ್ಲಿ ಕೈ ನಾಯಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನುಮತಿಯಿಲ್ಲದೆ ಪ್ರತಿಭಟನೆ ನಡೆಸುತ್ತಿರುವಾಗ ಸುಮಾರು 60 ರಿಂದ 70 ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಶಾಹಿದ್ ಪಾರ್ಕ್ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸರ್ಕಲ್ ಅಧಿಕಾರಿ (ಸದರ್) ಅನುರಾಗ್ ಸಿಂಗ್ ಹೇಳಿದ್ದಾರೆ.
ಇವರು ಅನುಮತಿಯಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದರು ಮತ್ತು ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸುತ್ತಿರುವಾಗ ಸುಮಾರು 300 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ನೀಲಂ ನಿಷಾದ್ ಹೇಳಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಹಸುಗಳು ಮತ್ತು ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ನಿಷಾದ್ ಆರೋಪಿಸಿದ್ದಾರೆ. ಹಸಿವಿನಿಂದಾಗಿ ಗೋಶಾಲೆಗಳಲ್ಲಿ ಹಸುಗಳು ಸಾಯುತ್ತಿವೆ ಮತ್ತು ಸಾಲ ಮತ್ತು ಇತರ ಸಮಸ್ಯೆಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಿಷಾದ್ ಹೇಳಿದ್ದಾರೆ.