ಮಂಗಳೂರು(08-10-2020): ಆಂಧ್ರ ಸಿಎಂ ಪರಿಹಾರ ನಿಧಿ ಖಾತೆಗೆ ಕನ್ನ ಹಾಕಿದ ಮಂಗಳೂರಿನ ಸಿನಿಮಾ ನಿರ್ಮಾಪಕ ಸೇರಿದಂತೆ 6 ಮಂದಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಯೋಗೀಶ್ ಆಚಾರ್ಯ, ಉದಯ್ ಶೆಟ್ಟಿ ಕಾಂತವರ, ಬ್ರಿಜೆಶ್ ರೈ, ಗಂಗಾಧರ ರಾವ್ ಮತ್ತು ಇತರೆ ಎಂದು ಗುರುತಿಸಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳು ನಕಲಿ ಚೆಕ್ ಬಳಸಿ ಆಂಧ್ರ ಸಿಎಂ ಪರಿಹಾರ ನಿಧಿಯಿಂದ 117 ಕೋಟಿ ರೂ. ಹಣ ವಿತ್ಡ್ರಾ ಮಾಡಲು ಸಂಚು ರೂಪಿಸಿದ್ದರು ಮತ್ತು ಒಟ್ಟು ಮೂರು ನಕಲಿ ಚೆಕ್ಗಳನ್ನು ಮಂಗಳೂರು, ಕೋಲ್ಕತ ಮತ್ತು ನವದೆಹಲಿ ಬ್ಯಾಂಕ್ಗಳಲ್ಲಿ ಡೆಪಾಸಿಟ್ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಸಹಿ ಬಗ್ಗೆ ಅನುಮಾನಗೊಂಡ ಎಸ್ಬಿಐ ಅಧಿಕಾರಿಗಳು ವಿಜಯವಾಡದ ವೆಲಗಪುಡಿಯಲ್ಲಿರುವ ಎಸ್ಬಿಐ ಮುಖ್ಯ ಕಚೇರಿಯಲ್ಲಿ ಚೆಕ್ ಕುರಿತು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಯೋಗೀಶ್ ಆಚಾರ್ಯ 52 ಕೋಟಿ ರೂ. ಮೌಲ್ಯದ ಚೆಕ್ ಅನ್ನು ಮೂಡಬಿದರೆಯ ಎಸ್ಬಿಐನಲ್ಲಿ ಡೆಪಾಸಿಟ್ ಮಾಡಲು ಪ್ರಯತ್ನಿಸಿದ್ದ. ಆರೋಪಿ ಉದಯ್ ಶೆಟ್ಟಿ ಸಿನಿಮಾ ನಿರ್ಮಾಪಕನಾಗಿದ್ದು ಈತ ಕೂಡ ಮಂಗಳೂರು ಬ್ರಾಂಚ್ ನಲ್ಲಿ ಡೆಪಾಸಿಟ್ ಮಾಡಲು ಯತ್ನಿಸಿದ್ದ.