ಲೂಧಿಯಾನ (14-12-2020): ಆಘಾತಕಾರಿ ಘಟನೆಯೊಂದರಲ್ಲಿ, ಡಿಸೆಂಬರ್ 8 ರಂದು ಲುಧಿಯಾನದ ಸಿವಿಲ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮಹಿಳೆಯ ಗರ್ಭದೊಳಗೆ ಟವೆಲ್ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ಪತಿ ರವೀಂದರ್ ಸಿಂಗ್ ಅವರ ಸಂಬಂಧಿಕರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಸಿವಿಲ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಘಟಕದ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ತೀವ್ರ ನಿರ್ಲಕ್ಷ್ಯಕ್ಕಾಗಿ ಆಪರೇಟಿಂಗ್ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಘಟನೆಯನ್ನು ಗಂಭೀರವಾಗಿ ಗಮನಿಸಿದ ಸಿವಿಲ್ ಸರ್ಜನ್ ಡಾ.ರಾಜೇಶ್ ಬಗ್ಗಾ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ರವೀಂದರ್ ಎಂಬವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಹೆರಿಗೆ ನೋವು ಅನುಭವಿಸಿದ ನಂತರ ಡಿಸೆಂಬರ್ 7 ರಂದು ಪತ್ನಿಯನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಸೂಚಿಸಿದರು. ಶಸ್ತ್ರಚಿಕಿತ್ಸೆ ಡಿಸೆಂಬರ್ 8 ರಂದು ನಡೆಯಿತು, ಮಗು ಆರೋಗ್ಯವಾಗಿದ್ದರೂ, ನನ್ನ ಹೆಂಡತಿ ನೋವಿನಿಂದ ಬಳಲುತ್ತಿದ್ದಳು. ಬಳಿಕ ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಆಕೆಯ ಹೊಟ್ಟೆಯೊಳಗೆ ಟವಲ್ ಇರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.