ಸಿನಿಮಾ ಸ್ಕ್ಯಾನ್- ‘ರಾಬರ್ಟ್!’

Share on facebook
Share on twitter
Share on linkedin
Share on whatsapp
Share on telegram
Share on email
Share on print


– ಸಂತೋಷ್ ಕುಮಾರ್ ಎಲ್ ಎಮ್

ಮಾಸ್ ಅಂತ ಹೇಳಿಕೊಳ್ಳೋ ಸಿನಿಮಾಗಳಲ್ಲಿ ನಿರಾಶೆ ಆಗುವುದೇ ಜಾಸ್ತಿ. ಅದರಲ್ಲೂ ಇತ್ತಿಚೆಗಂತೂ ಮೂರ್ನಾಲ್ಕು ವರ್ಷಗಳ ಕಾಲ ತಯಾರಾದ ಸಿನಿಮಾ ಅಂದರೆ ಅಲ್ಲೇ ಏನೋ ಅಳುಕು. ಏಕೆಂದರೆ ಬಹುತೇಕ ಸಿನಿಮಾಗಳು ನಿರಾಶೆ ಮೂಡಿಸಿದ್ದೇ ಹೆಚ್ಚು.

ಆದರೆ ರಾಬರ್ಟ್ ಅದಕ್ಕೆಲ್ಲ ಅಪವಾದ. ತರುಣ್ ಸುಧೀರ್ ಅಂಥದ್ದೊಂದು ಚಂದದ ಸಿನಿಮಾವನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಕಥೆ ನಿಮಗೆ ಹೇಳಿದರೆ ಈ ಎಳೆಯನ್ನು ಎಲ್ಲೋ ಕೇಳಿದ್ದೀನಿ ಅಂತ ನಿಮಗನ್ನಿಸುತ್ತದೆ. ತಮಿಳಿನ “ಭಾಷಾ” ಸೇರಿದಂತೆ ಕಳೆದ ಮೂವತ್ತು ವರ್ಷಗಳಲ್ಲಿ ಅನೇಕ ಸಿನಿಮಾಗಳಲ್ಲಿ ಈ ಎಳೆಯನ್ನು ಬಳಸಿಕೊಂಡಿದ್ದಾರೆ. ಹಾಗಂತ ಇದನ್ನು ನೂರರಲ್ಲಿ ಒಂದು ಅಂತ ನಿರ್ಲಕ್ಷಿಸಬಹುದಾ? ಖಂಡಿತ ಇಲ್ಲ. ದೊಡ್ಡ ಬಜೆಟ್ಟಿನಲ್ಲಿ ತಯಾರಾದ ಈ ಸಿನಿಮಾದಲ್ಲಿ ಅದೇ ಕಥೆಯನ್ನು ಅದ್ದೂರಿಯಾಗಿ ಹೇಳಿದ್ದಾರೆ. ಕೆಲ ಸಿನಿಮಾಗಳು ದೊಡ್ಡ ಬಜೆಟ್ ಅಂತ ಹೇಳಿಕೊಂಡರೂ ಆ ಖರ್ಚು ಅಲ್ಲಿ ಕಾಣಿಸುವುದಿಲ್ಲ. ಆದರೆ ಇಲ್ಲಿ ಹಾಗಿಲ್ಲ.ಪ್ರತೀ ರೂಪಾಯಿಯು ಅಲ್ಲಿ ಎದ್ದು ಕಾಣುತ್ತದೆ.

ದರ್ಶನ್ ತೆರೆಯಲ್ಲಿ ಕಂಡರೆ ಸಾಕು ಕಿವಿಗಡಚ್ಚುವ ಹಾಗೆ ಕೂಗುವ ಅಭಿಮಾನಿಗಳು ಎಲ್ಲೆಲ್ಲೂ ಸಾಮಾನ್ಯ. ಆದರೆ ಆ ಮಾಸ್ ಹೀರೋ ಎಂಟ್ರಿಗೊಂದು ಸರಿಯಾದ ಆರಂಭ ಕೊಟ್ಟರೆ ಥಿಯೇಟರ್ ಛಾವಣಿ ಹಾರಿ ಹೋಗುತ್ತದೆ. ಅಂಥದ್ದೊಂದು ಮೆಚ್ಚುವಂತಹ, ಮೈನವಿರೇಳಿಸುವ ಆರಂಭವನ್ನು ಇಲ್ಲಿ ಕಟ್ಟಿಕೊಟ್ಟಿರುವುದು ನಿಜಕ್ಕೂ ಖುಶಿಪಡುವ ವಿಚಾರ. ದರ್ಶನ್ ಮ್ಯಾನರಿಸಂ’ಗೆ ಸರಿಯಾದ ರೀತಿಯಲ್ಲಿ ಈ ಸಿನಿಮಾವನ್ನು ಮಾಡಿದ್ದಾರೆ ತರುಣ್. ಕಥೆ ಅದೇ ಆದರೂ ಅದನ್ನು ಪ್ರಸ್ತುತಪಡಿಸಿರುವ ರೀತಿ ನಮ್ಮನ್ನು ತನ್ನತ್ತ ಸೆಳೆದುಕೊಳ್ಳುತ್ತದೆ.

ಮತ್ತೊಮ್ಮೆ, ಇಲ್ಲಿ ನೀವು ಸಿಕ್ಕಾಪಟ್ಟೆ ಲಾಜಿಕ್ ಹುಡುಕಬೇಕಾದ ಪ್ರಮೇಯವಿಲ್ಲ. ನೀವು ಕಮರ್ಷಿಯಲ್ ಸಿನಿಮಾಗಳ ಅಭಿಮಾನಿಯಾದರೆ ಈ ಸಿನಿಮಾ ನಿಮ್ಮ ಕಣ್ಣಿಗೆ ಹಬ್ಬ.ಅದು ಬರೀ ಹೀರೋ ಎಂಟ್ರಿ ಸೀನ್ ಅಷ್ಟೇ ಅಲ್ಲ. ಬೈಕಿನ ದೃಶ್ಯಗಳಾಗಲಿ, ಜಿಮ್’ನ ಹೊಡೆದಾಟದ ದೃಶ್ಯಗಳಾಗಲಿ. ಇಡೀ ಸಿನಿಮಾದ ಪ್ರತೀ ದೃಶ್ಯದಲ್ಲೂ ದರ್ಶನ್ ವಿಜೃಂಭಿಸುತ್ತಾರೆ. ಅನೇಕ ಆಸಕ್ತಿಕರ ವಿಷಯಗಳನ್ನು ಒಟ್ಟಿಗೆ ಸೇರಿಸಿ ಚಿತ್ರಕಥೆ ಹೆಣೆದಿರುವ ರೀತಿ ಕೂಡ ಮೆಚ್ಚುವಂಥದ್ದೇ.

ವಿನೋದ್ ಪ್ರಭಾಕರ್’ಗೂ ಕೂಡ ಅವಕಾಶ ಸಿಗುವಂತೆ ಅವರಿಗೂ ಸ್ಕ್ರೀನ್-ಸ್ಪೇಸ್ ನೀಡಿರುವುದು ದರ್ಶನ್’ಗೆ ಅವರ ಮೇಲಿರುವ ಗೌರವವೇ ಕಾರಣ. ದರ್ಶನ್ ಜೊತೆ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಪುಟ್ಟ ಹುಡುಗನೂ ಚೆನ್ನಾಗಿ ಅಭಿನಯಿಸಿದ್ದಾನೆ. ದೇವರಾಜ್, ಜಗಪತಿಬಾಬು, ರವಿಶಂಕರ್ ಸೇರಿದಂತೆ ಎಲ್ಲರದೂ ಮೆಚ್ಚುವ ಅಭಿನಯ. ಕ್ಲೈಮ್ಯಾಕ್ಸಿನಲ್ಲೂ ರವಿಶಂಕರ್ ತಮ್ಮ ಡೈಲಾಗುಗಳಿಂದ ನಕ್ಕು ನಗಿಸುತ್ತಾರೆ. ಅನೇಕ ಕಲಾವಿದರು ಪುಟ್ಟ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಆದರೆ ಪ್ರಸ್ತಾಪಿಸಲೇಬೇಕಾದ ಸಿನಿಮಾದ ಅತೀ ದೊಡ್ಡ ಹೈಲೈಟ್ ಅಂದರೆ ಅದು ಶಿವರಾಜ್ ಕೆ.ಆರ್.ಪೇಟೆ ಅವರದು. ದರ್ಶನ್ ಜೊತೆ ಪೋಷಕ ಪಾತ್ರ ಸಿಕ್ಕರೆ ಸಾಕು ಅನ್ನುವಂತಿರುವಾಗ ಈ ಸಿನಿಮಾದಲ್ಲಿ ಅವರಿಗೆ ಸಿಕ್ಕಿರುವುದು ಪೋಷಕಪಾತ್ರಕ್ಕಿಂತ ಹೆಚ್ಚಿನದು. ಮೊದಮೊದಲಿಗೆ ಅವರ ಡೈಲಾಗ್ ಹೇಗಿದೆ ಅಂತ ಆಶ್ಚರ್ಯವಾಯಿತಾದರೂ ದ್ವಿತೀಯಾರ್ಧದಲ್ಲಿ ಅವರ ಪಾತ್ರಕ್ಕೂ ತೂಕದ ಹಿನ್ನೆಲೆ, ಅದೇ ವಿಷಯದ ಸಲುವಾಗಿ ಒಂದು ಮೈನವಿರೇಳಿಸುವ ಜಿಮ್ ಫೈಟ್ ಎಲ್ಲ ಮಜಾ ಕೊಟ್ಟಿತು. ಕಮರ್ಷಿಯಲ್ ಚಿತ್ರದಲ್ಲೂ ಪೋಷಕ ಪಾತ್ರವೊಂದನ್ನು ಹೀಗೆ ಕಟ್ಟಿ ಅದನ್ನು ಸಿನಿಮಾದ ಭಾಗವನ್ನಾಗಿಸಿದ ನಿರ್ದೇಶಕರಿಗೆ ಅಭಿನಂದನೆಗಳು. ಬೆರಳು ಕೊಟ್ಟರೆ ಹಸ್ತವನ್ನೇ ನುಂಗುವ ನಟ ಶಿವರಾಜ್ ಕೆ.ಆರ್. ಪೇಟೆ ಆ ಕೊಟ್ಟ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಅವರಿಗೆ ಹೀಗೆ ಇನ್ನೂ ಅನೇಕ ಒಳ್ಳೆಯ ಪಾತ್ರಗಳು ನಮ್ಮ ಸಿನಿರಂಗದಲ್ಲಿ ಸಿಗಲಿ.

ಹಿನ್ನೆಲೆ ಸಂಗೀತವೇ ಈ ಸಿನಿಮಾದ ಇನ್ನೊಂದು ಹೈಲೈಟ್. ಹರಿಕೃಷ್ಣ ಇಲ್ಲದಿದ್ದರೆ ಬೇರೊಬ್ಬರಿಂದ ಇದು ಸಾಧ್ಯವಾಗುತ್ತಿರಲಿಲ್ಲವೇನೋ. ಹಾಡುಗಳಿಗೆ ಸಂಗೀತ ನೀಡಿರುವವರು ಅರ್ಜುನ್ ಜನ್ಯ. “ಕಣ್ಣು ಹೊಡಿಯಾಕ” ಹಾಡು ಕೇಳುವಾಗ ನಮ್ಮ ಮನಸ್ಸಿನಲ್ಲಿ “ಕಣ್ಣೇ ಅದಿರಿಂದಿ” ತೆಲುಗು ಹಾಡು ಗುಂಯ್ಗುಡುತ್ತದೆ. “ರಾಮನಾಮ ಹಾಡಿರೋ” ಸೇರಿದಂತೆ ಎಲ್ಲ ಹಾಡುಗಳೂ ಚೆನ್ನಾಗಿವೆ.

ರಾವಣನ ಡೈಲಾಗಿನ ದೃಶ್ಯವಂತೂ ನನಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾಯ್ತು. ಬೇಕಂತಲೇ ಪ್ರೇಕ್ಷಕನ ಸಂಯಮವನ್ನು ಪರೀಕ್ಷಿಸಿ ಒಮ್ಮೆಲೇ ಬಾಂಬ್ ಸಿಡಿದಂತೆ ಆ ದೃಶ್ಯವನ್ನು ನಮಗೆ ಉಣಬಡಿಸುತ್ತಾರೆ. ಅಜಿತ್ ಅಭಿನಯದ ತಮಿಳು ಸಿನಿಮಾವೊಂದು ನೆನಪಾಗುತ್ತದೆ. ಸಿನಿಮಾದ ಕಥೆಗೆ ತಕ್ಕಂತೆ ಕಪ್ಪು-ಬಿಳುಪಿನ ಉಡುಗೆಗಳನ್ನು ಬಳಸಿರುವುದು ಸೂಕ್ತವಾಗಿದೆ.

ನೆಲದ ಮೇಲೆ ಬಾಳೆಹಣ್ಣಿನ ಸಿಪ್ಪೆ ಬಿಸಾಕಿಯೋ, ಎಣ್ಣೆ ಚೆಲ್ಲಿಯೋ ಕಾಲು ಜಾರುವಂತೆ ಮಾಡಿ ಹೀರೋ/ಹೀರೋಯಿನ್ನು ಒಬ್ಬರನ್ನೊಬ್ಬರು ಪಟಾಯಿಸಲು ಪ್ರಯತ್ನಿಸುವ ದೃಶ್ಯಗಳನ್ನು ಇನ್ನೂ ಸೇರಿಸುತ್ತಿದ್ದಾರಲ್ಲ ಅನ್ನುವುದೇ “ಆ ದೃಶ್ಯಗಳಿಗಿಂತ” ದೊಡ್ಡ ಕಾಮಿಡಿ!

ಉಳಿದಂತೆ ಇಡೀ ಕುಟುಂಬ ನೋಡಿ ಎಂಜಾಯ್ ಮಾಡುವಂತಹ ಸಿನಿಮಾ “ರಾಬರ್ಟ್”. ಅನೇಕ ದಿನಗಳ ನಂತರ ಈ ಥರದ ಸಿನಿಮಾವೊಂದು ಥಿಯೇಟರಿಗೆ ಬಂದಿದೆ. ಕೊರೋನಾ ಲಾಕ್’ಡೌನ್ ಮುಗಿದ ಬಳಿಕ ಪ್ರೇಕ್ಷಕರನ್ನು ಸೆಳೆಯಲು ಇಂತಹ ಸಿನಿಮಾಗಳು ಅತ್ಯವಶ್ಯಕ. ಮಿಸ್ ಮಾಡದೆ ನೋಡಿ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು