ಲಡಾಖ್(21-10-2020): ಗಡಿ ದಾಟಿ ಬಂದ ಚೀನಾದ ಸೈನಿಕನನ್ನು ಈ ಸೋಮವಾರದಂದು ಭಾರತೀಯ ಸೇನೆಯು ಸೆರೆ ಹಿಡಿದಿತ್ತು. ಇದೀಗ ಆತನನ್ನು ಚೀನಾಗೆ ಹಸ್ತಾಂತರಿಸಲಾಗಿದೆ. ಸೆರೆ ಸಿಕ್ಕ ಸೈನಿಕನನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಕೇಳಿ, ಚೀನಾವು ಭಾರತೀಯ ಸೇನೆಯನ್ನು ಈ ಮೊದಲೇ ಸಂಪರ್ಕಿಸಿತ್ತು.
ಸಾಕಷ್ಟು ವಿಚಾರಣೆ ನಡೆಸಿದ ಬಳಿಕ ಸೈನಿಕನನ್ನು ಚುಶೂಲ್ ಮೋಲ್ಡೋ ಮೀಟಿಂಗ್ ಪಾಯಿಂಟಿನಲ್ಲಿ ಮರಳಿ ಚೀನಾಗೆ ಕಳುಹಿಸಲಾಗಿದೆ. ದಾರಿ ತಪ್ಪಿ ಬಂದಿರುವುದೋ ಅಥವಾ ಗುಪ್ತಚರ ಚಟುವಟಿಕೆಗಳನ್ನು ನಡೆಸಲು ಬಂದಿರುವುದೋ ಎಂದು ತಿಳಿಯಲು ಹಲವಾರು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆತ ಅಪರಾಧಿಯಲ್ಲವೆಂದು ವಿಚಾರಣೆಯಿಂದ ತಿಳಿದು ಬಂದಿದೆ.
ಸೈನಿಕನಿಗೆ ಬೇಕಾದ ಆಹಾರ, ಬಟ್ಟೆ, ಆಮ್ಲಜನಕ, ವೈದ್ಯಕೀಯ ಸಹಾಯ ಇತ್ಯಾದಿಗಳನ್ನು ಭಾರತೀಯ ಸೇನೆಯು ನೀಡಿದೆ. ದಾರಿ ತಪ್ಪಿದ ಆತ ಒಬ್ಬಂಟಿಯಾಗಿಯೇ ಬಂದಿರುವುದು ಮತ್ತು ಕೈಯಲ್ಲಿ ಯಾವುದೇ ಆಯುಧಗಳಿರಲಿಲ್ಲವೆಂದು ತನಿಖಾ ಏಜೆನ್ಸಿಗಳು ತಿಳಿಸಿದ್ದಾರೆ