ಚಿಕಿತ್ಸೆ ಸಿಗದೇ ಕೋವಿಡ್ ರೋಗಿಯ ಮರಣ | ವೈದ್ಯರನ್ನು ಹೊಡೆದೋಡಿಸಿದ ಮೃತರ ಬಂಧುಗಳು!

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೋವಿಡ್ ರೋಗಿಯು ಚಿಕಿತ್ಸೆ ಸಿಗದೇ ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಬಂಧುಗಳು ವೈದ್ಯರನ್ನು ಹೊಡೆದೋಡಿಸಿದ ಘಟನೆ ವರದಿಯಾಗಿದೆ.

ದೆಹಲಿಯಲ್ಲಿರುವ ಪ್ರತಿಷ್ಠಿತ ಅಪೋಲೋ ಖಾಸಗೀ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಘಟನೆ ನಡೆದಿದ್ದು, ವೈದ್ಯರೂ ಸೇರಿದಂತೆ ಹಲವು ಆರೋಗ್ಯ ಸಿಬ್ಬಂದಿಗಳಿಗೆ ಗಾಯಗಳಾಗಿವೆ.

ಕೋವಿಡ್ ಬಾಧಿತೆಯಾಗಿದ್ದ ಅರುವತ್ತೆರಡು ವರ್ಷದ ವೃದ್ಧೆಯನ್ನು ಆಕೆಯ ಕುಟುಂಬಿಕರು ಅಪೋಲೋ ಆಸ್ಪತ್ರೆಗೆ ತಂದಿದ್ದರು. ವೈದ್ಯರು ಅವರಿಗೆ ಸಾಮಾನ್ಯ ಹಾಸಿಗೆ ನೀಡಿದರು. ಗಂಭೀರಾವಸ್ಥೆಯಲ್ಲಿರುವುದರಿಂದ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಐಸಿಯುವಿಗೆ ಸೇರಿಸುವಂತೆ ಆಕೆಯ ಬಂಧುಗಳು ಬೇಡಿಕೆಯಿಟ್ಟರೂ, ವೈದ್ಯರು ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ.

ಗಂಭೀರಾವಸ್ಥೆಯಲ್ಲಿದ್ದ ಕೋವಿಡ್ ರೋಗಿಗೆ ಸಕಾಲದಲ್ಲಿ ಐಸಿಯು ಸಿಗದೇ ಮೃತಪಟ್ಟರು. ತಕ್ಷಣವೇ ಉದ್ರಿಕ್ತ ಬಂಧುಗಳು ಆಸ್ಪತ್ರೆಯನ್ನು ಆಕ್ರಮಿಸಿದರು. ಅಲ್ಲಿರುವ ಕುರ್ಚಿ, ಮೇಜು ಮತ್ತಿತರ ವೈದ್ಯಕೀಯ ಪರಿಕರಗಳನ್ನೂ ಧ್ವಂಸಗೊಳಿಸಿದರು.

ಅಲ್ಲಿನ ವೈದ್ಯರನ್ನು ಸುತ್ತುವರಿದು ಹಲ್ಲೆ ನಡೆಸಿ, ಅಲ್ಲಿಂದ ಓಡುವಂತೆ ಮಾಡಿದರು. ಜೊತೆಗೆ ನರ್ಸುಗಳೂ ಸೇರಿದಂತೆ ಆಸ್ಪತ್ರೆಯ ಇತರ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿದರು. ಪೋಲೀಸರು ಬಂದು ಪರಿಸ್ಥಿತಿಯನ್ನು ತಿಳಿಗೊಳಿಸುವ ವರೆಗೂ ಎಳೆದಾಟ, ನೂಕಾಟ ಮುಂದುವರಿದಿತ್ತು ಎನ್ನಲಾಗಿದೆ.

ನಮ್ಮಲ್ಲಿ ಐಸಿಯು ಹಾಸಿಗೆಗಳ ಕೊರತೆಯಿತ್ತು. ರೋಗಿಯ ಬಂಧುಗಳಿಗೆ ಮೊದಲೇ ನಾವು ವಿಚಾರವನ್ನು ತಿಳಿಸಿದ್ದೆವು. ಬಳಿಕ ರೋಗಿಯ ಹಾಸಿಗೆ ಇರುವಲ್ಲಿಗೇ ಆಕ್ಸಿಜನ್ ಮತ್ತು ತುರ್ತು ವೈದ್ಯಕೀಯ ಸೇವೆಗಳನ್ನೂ ಒದಗಿಸಿದ್ದೆವು. ಆದರೆ ರೋಗಿಯು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಳಿಕ ರೋಗಿಯ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿಗಳನ್ನು ಆಕ್ರಮಿಸಲು ತೊಡಗಿದರು.” ಎಂದು ಅಪೋಲೋ ಆಸ್ಪತ್ರೆಯ ವಕ್ತಾರೆ ಸರಿತಾ ವಿಹಾರ್ ಹೇಳುತ್ತಾರೆ.

ಘಟನೆಯಲ್ಲಿ ಒಟ್ಟು ಎಂಟು ಮಂದಿಗೆ ಗಾಯಗಳಾಗಿವೆ. ಇದರಲ್ಲಿ ವೈದ್ಯರು, ನರ್ಸುಗಳು, ಆಸ್ಪತ್ರೆಯ ಭದ್ರತಾ ಸಿಬ್ಬಂದಿಗಳೂ ಸೇರಿದ್ದಾರೆ. ಆದರೆ ಯಾರೂ ಗಂಭೀರ ಸ್ಥಿತಿಯಲ್ಲಿಲ್ಲ ಮತ್ತು ಯಾರನ್ನೂ ಅಸ್ಪತ್ರೆಗೆ ಸೇರಿಸಲಾಗಿಲ್ಲ.

ರೋಗಿಯು ಮೃತಪಟ್ಟಿರುವುದಕ್ಕೆ ಸಂತಾಪ ವ್ಯಕ್ತಪಡಿಸುತ್ತೇವೆ. ಅದೇ ವೇಳೆ ಕೋವಿಡ್ ಸಂದಿಗ್ಧ ಸಮಯದಲ್ಲಿ ದಣಿವರಿಯದೇ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತಿತರ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿರುವುದು ತುಂಬಾ ಆಘಾತಕಾರಿಯಾದುದು.” ಎಂದು ಆಸ್ಪತ್ರೆಯು ಹೇಳಿಕೆ ನೀಡಿದೆ.

ಯಾರಿಂದಲೂ ದೂರು ಬರದ ಹಿನ್ನೆಲೆಯಲ್ಲಿ,ಘಟನೆಯ ಕುರಿತಂತೆ ವರೆಗೂ ಪ್ರಕರಣ ದಾಖಲಿಸಲಾಗಿಲ್ಲ ಎಂದು ಮಂಗಳವಾರ ಸಂಜೆ ಪೋಲೀಸರು ತಿಳಿಸಿದ್ದಾರೆ. ಘಟನೆಯ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗಿದೆ.

ಕೋವಿಡ್ ಸಾಂಕ್ರಾಮಿಕ ರೋಗವು ದೇಶಾದ್ಯಂತ ತೀವ್ರ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾಡಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು