ನವದೆಹಲಿ(21-12-2020): ಚರ್ಚೆ ನಡೆಸಲು ಸರಕಾರ ನೀಡಿದ ಕರೆಯಲ್ಲಿ ಪ್ರಾಮಾಣಿಕತೆ ಇಲ್ಲವೆಂದು ಪ್ರತಿಭಟನಾ ನಿರತ ರೈತರು ಆರೋಪಿಸಿದ್ದಾರೆ. ಸುಪ್ರೀಮ್ ಕೋರ್ಟಿನ ನಿರ್ದೇಶನವಿರುವ ಕಾರಣದಿಂದ ಮಾತ್ರವೇ ಸರಕಾರವು ಚರ್ಚೆಗೆ ಕರೆಯುತ್ತಿದೆ ಎಂದಿದ್ದಾರೆ.
ಸರಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುವ ಪ್ರತಿಭಟನೆಯು ಇಪ್ಪತ್ತಾರನೇ ದಿನಕ್ಕೆ ಕಾಲಿಟ್ಟಿದೆ. ಉಪವಾಸ ಸತ್ಯಾಗ್ರಹವೂ ಮುಂದುವರಿಯುತ್ತಿದೆ. ಹಲವಾರು ಸುತ್ತಿನ ಮಾತೆಕತೆಗಳು ನಡೆದರೂ ಸರಕಾರ-ರೈತರ ನಡುವೆ ಒಮ್ಮತ ಮೂಡಿಲ್ಲ.
ಕೃಷಿ ಮಸೂದೆಗಳನ್ನು ಹಿಂಪಡೆಯುವ ವರೆಗೂ ನಾವು ಪ್ರತಿಭಟಿಸುವೆವು. ಸರಕಾರವು ಮುಂದಿನ ಸುತ್ತಿನ ಮಾತುಕತೆಗೆ ಕರೆದರೂ ನಾವು ಭಾಗವಹಿಸುವುದಿಲ್ಲ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಈ ನಡುವೆ ಮಹಾರಾಷ್ಟ್ರದಿಂದಲೂ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ದೆಹಲಿ ಕಡೆಗೆ ಹೊರಟಿದ್ದಾರೆ. ಉತ್ತರ ಪ್ರದೇಶದಿಂದ ಬಂದ ರೈತರನ್ನು ಗಾಝಿಪುರದ ಸಮೀಪ ಪೋಲೀಸರು ತಡೆದಾಗ, ದೆಹಲಿ-ಮೀರತ್ ಹೆದ್ದಾರಿ ಬಂದ್ ಮಾಡಿದರು. ಪ್ರತಿಭಟನಾ ಸ್ಥಳವಾದ ಗಾಝಿಪುರಕ್ಕೆ ಹೋಗಲು ಸಮ್ಮತಿಸಿದಾಗ, ಬಂದ್ ಕೈ ಬಿಟ್ಟರು.
ಸಿಂಘು ಗಡಿಯಲ್ಲಿ ರೈತರಿಂದ ರಕ್ತದಾನ ಶಿಬಿರವೂ ನಡೆಯಿತು. ನಾಶಿಕದಿಂದ ದೆಹಲಿಗೆ 3000 ರೈತರು ವಾಹನ ಜಾಥಾ ನಡೆಸಿ, ಚಾಂದ್ವಾಡಿನಲ್ಲಿ ರಾತ್ರಿ ತಂಗಲಿದ್ದಾರೆ. ಮಂಗಳವಾರ ಇನ್ನೂ 7000 ರೈತರು ಅವರನ್ನು ಸೇರಲಿದ್ದಾರೆ.
ನಾಳೆ ಮುಂಬೈಯಿಯಲ್ಲಿರುವ ಆಧಾನಿ ಮತ್ತು ಅಂಬಾನಿ ಕಂಪೆನಿಗಳ ಕಛೇರಿಗಳ ಮುಂದೆ ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ. ಅದೇ ರೀತಿ ಪ್ರಧಾನ ಮಂತ್ರಿಯ ಮನ್ ಕೀ ಬಾತ್ ಸಂದರ್ಭದಲ್ಲಿ ತಟ್ಟೆ ಬಡಿದು, ಪ್ರತಿಭಟಿಸಲಿದ್ದಾರೆ.
ದೆಹಲಿಯಲ್ಲಿ ಉಷ್ಣಾಂಶವು ಮೂರು ಸೆಲ್ಸಿಯಸಿಗಿಂತ ಕಡಿಮೆಯಾದರೂ ರೈತ ಹೋರಾಟದ ಕಾವು ಕಮ್ಮಿಯಾಗಿಲ್ಲ.