ದಕ್ಷಿಣ ಕನ್ನಡದ ಪ್ರತಿಷ್ಠಿತ ಕಾಲೇಜುಗಳಲ್ಲಿ ಶಿಕ್ಷಣದ ಹೆಸರಿನಲ್ಲಿ ದಂಧೆ-ಸಿಎಫ್ ಐ

cfi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು(08-12-2020): ಶಿಕ್ಷಣದ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ದಂಧೆಯು ಜಿಲ್ಲೆಯ ಜನರನ್ನು ತಲೆ ತಗ್ಗಿಸುವಂತೆ ಮಾಡಿದೆ. ಅಡ್ಮಿಷನ್ ನೆಪದಲ್ಲಿ ಮತ್ತು ಸೀಟು ಹಂಚಿಕೆಯ ವಿಚಾರದಲ್ಲಿ ನಗರ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಶ್ರೀನಿವಾಸ್  ಮತ್ತು ಯನೆಪೋಯಾ ಮೆಡಿಕಲ್  ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಕೋಟಿ ಕೋಟಿ ವಂಚಿಸಲಾಗುತ್ತಿದೆ. ಇದು ಶಿಕ್ಷಣದಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರು ಮತ್ತು ಶಿಕ್ಷಣದ ವ್ಯಾಪಾರೀಕರಣ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ  ಆರೋಪಿಸಿದ್ದಾರೆ.

ಈ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಂಧೆಯ ವಿರುದ್ಧ ಶಿಕ್ಷಣ ಇಲಾಖೆ ಅಥವಾ ಸರಕಾರವು ತನಿಖೆ ನಡೆಸಬೇಕು. ಜಿಲ್ಲೆಯ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆ.ಇ.ಎ ಅಧೀನದಲ್ಲಿ ನಡೆದ  ಪ್ರವೇಶ ಪರೀಕ್ಷೆಗಳಾದ  ಸಿ.ಇ.ಟಿ ರ‍್ಯಾಂಕ್ ಮೂಲಕ ಪ್ರವೇಶಾತಿ ಪಡೆದ ಮತ್ತು ಕಾಮೆಡ್ .ಕೆ, ಮೂಲಕ ಅರ್ಹತೆ ಪಡೆದ ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ವಿ.ವಿ ಯ ಪ್ರಕಾರ ಕಾಲೇಜುಗಳು ಕೇವಲ 56000 ಮಾತ್ರ ಶುಲ್ಕ ಪಡೆಯಬೇಕು. ಆದರೆ ಸಂಸ್ಥೆಗಳು  ಕಾಲೇಜು ಫೀಸ್ ಎಂದು 19750  ಮತ್ತು 4 ವರ್ಷದಲ್ಲಿ  ಆಪ್ಟಿಟ್ಯೂಡ್ ಬೇಸಿಕ್ ಕೋರ್ಸ್ ಎಂಬ ನೆಪದಲ್ಲಿ 10000, ಇಂಡಸ್ಟ್ರಿಯಲ್ ಕನೆಕ್ಟ್ ಟ್ರೈನಿಂಗ್  ಹೆಸರಲ್ಲಿ 13000, ಪ್ಲೇಸ್‌ಮೆಂಟ್ ಮತ್ತು ಟ್ರೈನಿಂಗ್ ಹೆಸರಲ್ಲಿ 10000 ಹಾಗೂ ಇತರ ಹಲವು ಕಾರಣಗಳನ್ನು ಹೇಳಿ ಸುಮಾರು 55000 ದಷ್ಟು ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದು ಕಂಡುಬಂದಿರುತ್ತಿದೆ. ಇದು ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರೀಕರಣವಾಗಿದೆ ಅಲ್ಲದೆ ಖಾಸಗಿ ಕಾಲೇಜುಗಳು ತಮ್ಮ ಪ್ರತಿಷ್ಟೆಗಳನ್ನು ಉಳಿಸಿಕೊಳ್ಳಲು ಮತ್ತು ಪರಸ್ಪರ ಕಾಲೇಜುಗಳ ಮದ್ಯೆ ಪೈಪೋಟಿ ನಡೆಸಿ ವಿಧ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿದೆ. ಅಲ್ಲದೆ ಸಂಸ್ಥೆಯ ದಂದೆಯ ವಿರುದ್ಧ ಮಾತನಾಡಿದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಅಂಕಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ.

ಇನ್ನೊಂದು ಕಡೆ ಜಿಲ್ಲೆಯ ಖಾಸಗಿ ಮೆಡಿಕಲ್  ಕಾಲೇಜುಗಳಲ್ಲಿಯೂ  ಕೂಡಾ ಈ ದಂಧೆ ನಡೆಯುತ್ತಿದೆ. ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆಯುವ ವಿಧ್ಯಾರ್ಥಿಗಳಿಗೆ ನೇರವಾಗಿ ಕಾಲೇಜುಗಳು ಸೀಟು ನೀಡುತ್ತಿಲ್ಲ ಬದಲಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ತಮ್ಮ ಎಲ್ಲಾ ಸೀಟುಗಳನ್ನು ಅಡ್ಮಿಶನ್ ಕನ್ಸಲ್ಟೆನ್ಸಿ ವ್ಯಾಪಾರ ನಡೆಸುತ್ತಿರುವ ಏಜೆಂಟುಗಳಿಗೆ ಸೀಟನ್ನು ಮಾರುತ್ತಾರೆ. ವಿಧ್ಯಾರ್ಥಿಗಳು ಅಡ್ಮಿಶನ್ ಬೇಕಾದಲ್ಲಿ ಏಜೆಂಟ್‌ಗಳ ಮೂಲಕ ಹೆಚ್ಚುವರಿ ಶುಲ್ಕವನ್ನು ನೀಡಿ ದಾಖಲಾಗಬೇಕು. ಸಾಮಾನ್ಯವಾಗಿ ಮ್ಯಾನೆಜ್‌ಮೆಂಟ್ ಕೋಟಾದಲ್ಲಿ ಮೆಡಿಕಲ್ ಸೀಟು  ಬೇಕಾದಲ್ಲಿ ಕಾಲೇಜುಗಳು ನೀಡುತ್ತಿಲ್ಲ ವಿಧ್ಯಾರ್ಥಿಗಳು ಏಜೆಂಟ್ ಬಳಿಯೇ ಅಡ್ಮಿಶನ್ ಮಾಡಿಕೊಳ್ಳಬೇಕು. ಅಲ್ಲದೆ ನೀಟ್ ಪ್ರವೇಶಾತಿ ಬರೆದು ಅರ್ಹತೆಗೊಂಡ ವಿಧ್ಯಾರ್ಥಿಗಳಲ್ಲಿಯೂ  ಕೂಡಾ ಸರಕಾರ ನಿಗದಿ ಪಡಿಸಿದಕ್ಕಿಂತ ಪ್ರತಿವರ್ಷ 75000 ದಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಒಟ್ಟಾರೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಹೆಸರಿನಲ್ಲಿ ಬಹು ಕೋಟಿ ವಂಚನೆ ನಡೆಯುತ್ತಿದ್ದು  ಸರಕಾರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಈ ಎಲ್ಲಾ ವಂಚನೆಗಳಿಗೆ ಸರಕಾರವು ಕೂಡ ನೇರ ಹೊಣೆಯಾಗಿದೆ.  ಯಾಕೆಂದರೆ ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ಸರಕಾರಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಲ್ಲ. ಖಾಸಗಿ ಕಾಲೇಜುಗಳ ಈ ದಂಧೆಗೆ ಕಡಿವಾಣ ಹಾಕಲು ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಆದುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಈ ಅಡ್ಮಿಶನ್ ದಂಧೆಯನ್ನು ಲೋಕಾಯುಕ್ತ ಇಲಾಖೆಯು ಮಧ್ಯಪ್ರವೇಶಿಸಿ ಬಹಿರಂಗಗೊಳಿಸಬೇಕು. ಇದರ ಹಿಂದೆ ಇರುವ ವ್ಯಕ್ತಿಗಳಿಗೆ ಕಾನೂನಿನಡಿಯಲ್ಲಿ ಶಿಕ್ಷಿಸಿ ವಂಚನೆಗೊಳಗಾದ ವಿಧ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ಇಮ್ರಾನ್ ಪಿ ಜೆ  ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಸಾದಿಕ್, ಜಿಲ್ಲಾಧ್ಯಕ್ಷ ಹಸನ್ ಸಿರಾಜ್, ಜಿಲ್ಲಾ ಮುಖಂಡರಾದ ಸವಾದ್ ಕಲ್ಲರ್ಪೆ ಮತ್ತು ತಾಜುದ್ದೀನ್ ಉಪಸ್ಥಿತರಿದ್ದರು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು