ಶ್ರೀನಗರ(27/10/2020): ಇನ್ನು ಮುಂದೆ ಜಮ್ಮುಕಾಶ್ಮೀರದಲ್ಲಿ ಹೊರರಾಜ್ಯದವರು ಭೂಮಿಯನ್ನು ಖರೀದಿಸುವುದು ಸುಲಭವಾಗಲಿದೆ. ಈ ಸಂಬಂಧ ಕೇಂದ್ರ ಸರಕಾರ ಹಲವು ಕಾನೂನುಗಳ ತಿದ್ದುಪಡಿಯನ್ನು ಮಾಡಿದೆ.
ಇದುವರೆಗೆ ಜಮ್ಮುಕಾಶ್ಮೀರದಲ್ಲಿ ಆ ರಾಜ್ಯದ ಶಾಶ್ವತ ನಿವಾಸಿಗೆ ಮಾತ್ರ ಭೂಮಿ ಖರೀದಿಸಲು ಸಾಧ್ಯವಾಗುತ್ತಿತ್ತು. ಆದರೆ, ಈಗ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ಒಂದು ವರ್ಷವಾಗುತ್ತಿದ್ದಂತೆ ಕೇಂದ್ರ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಸೆಕ್ಷನ್ 17ರಿಂದ ‘ರಾಜ್ಯದ ಶಾಶ್ವತ ನಿವಾಸಿ’ ಎಂಬುದನ್ನು ತೆಗೆದು ಹಾಕಿದ್ದು, ಇನ್ನು ಮುಂದೆ ಹೊರ ರಾಜ್ಯದವರೂ ಇಲ್ಲಿ ಭೂಮಿ ಖರೀದಿಸುವುದಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲ.
ಕೇಂದ್ರದ ಮೋದಿ ಸರಕಾರ ಜಮ್ಮುಕಾಶ್ಮೀರದ ಭೂ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ವಿರೋಧಿಸಿದ್ದಾರೆ. `ಜಮ್ಮು ಮತ್ತು ಕಾಶ್ಮೀರ ಈಗ ಮಾರಾಟದ ವಸ್ತುವಿನಂತಾಗಿದೆ. ಈ ತಿದ್ದುಪಡಿಯಿಂದಾಗಿ ಅಲ್ಪ ಪ್ರಮಾಣದ ಭೂಮಿಯನ್ನು ಹೊಂದಿರುವ ಬಡವರು ಸಮಸ್ಯೆಗೆ ಸಿಲುಕಿಕೊಳ್ಳಲಿದ್ದಾರೆ’ ಎಂದು ಅವರು ಟ್ವೀಟ್ ಮೂಲಕ ಮೋದಿ ಸರಕಾರದ ನಡೆಯನ್ನು ಖಂಡಿಸಿದ್ದಾರೆ.