ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ಎಲ್ಲವೂ ಉಲ್ಟಾ!
ಇಲ್ಲಿ ಆರೋಪಿಗಳು ರಾಜಾರೋಷವಾಗಿ ತಿರುಗುತ್ತಾರೆ, ದೂರುದಾರರು, ಸಂತ್ರಸ್ತರು ತನಿಖೆ ಎದುರಿಸುತ್ತಾರೆ!
ಆರೋಪಿಗಳು ಭಯ ಹುಟ್ಟಿಸುತ್ತಾರೆ, ಆದರೂ ಅವರನ್ನೇ ರಕ್ಷಿಸಲಾಗುತ್ತದೆ. ಕಾನೂನಿನ ಮೇಲಿರುವ ಜನರ ಭರವಸೆಯನ್ನು ಈ ಸರ್ಕಾರ ಹುಸಿಗೊಳಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಬಿಜೆಪಿ ಸರ್ಕಾರದ ನಡೆಗಳನ್ನು ಖಂಡಿಸಿ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದೆ. ‘ಇದೊಂದು ಸಿಡಿ ಪ್ರಕರಣದಲ್ಲಿ ಸರ್ಕಾರದ ಲಜ್ಜೆಗೇಡಿತನ, ಅಸಾಮರ್ಥ್ಯ, ಅತ್ಯಾಚಾರಿಗಳ ಪರವಾದ ಒಲವು, ಮಹಿಳಾ ವಿರೋಧಿ ನಿಲುವು ಎಲ್ಲವೂ ಬಯಲಾಗಿದೆ. ಸಿಡಿ ಹೊರಬಂದಾಗಲೂ ರಾಜ್ಯದ ಮರ್ಯಾದೆ ಹರಾಜಾಗಿತ್ತು, ಈಗ ಆರೋಪಿಯನ್ನು ಬಂಧಿಸದೇ ರಕ್ಷಿಸುತ್ತಿರುವ ಸರ್ಕಾರದ ನಡೆಯಿಂದ ಇಡೀ ರಾಜ್ಯ ತಲೆ ತಗ್ಗಿಸುವಂತಾಗಿದೆ’ ಎಂದು ಕಾಂಗ್ರೆಸ್ ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದೆ.
“ಜೇಬಲ್ಲಿ ಬಾಂಬಿದೆ, ಜೇಬಲ್ಲಿ ಬಾಂಬಿದೆ” ಎಂದು ಆತ್ಮಹತ್ಯೆ ಬಾಂಬರ್ನಂತೆ ಹೇಳುತ್ತಿರುವ ಬಿಜೆಪಿ ಸರಕಾರದ ಮಾಜಿ ಸಚಿವರಿಗೆ ಬಾಂಬ್ ಜೇಬಲ್ಲಿ ಸಿಡಿದರೆ ಬಲಿಯಾಗುವುದು ತಾವೇ ಎಂದು ತಿಳಿದಿದೆಯೇ?! ಕೂಡಲೇ ಪೊಲೀಸ್ ಇಲಾಖೆ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಕಾರ್ಯಪ್ರವೃತ್ತವಾಗಲಿ”.
ಬಾಂಬ್ ನಿಷ್ಕ್ರಿಯಗೊಳಿಸಿ, ಅವರನ್ನ ಬಂಧಿಸಿ ಜೀವ ಉಳಿಸಲಿ! ರಾಜ್ಯ ಸರ್ಕಾರ “ಯುಪಿ ಮಾಡೆಲ್” ಅನುಸರಿಸುತ್ತಿದೆ. ಉತ್ತರಪ್ರದೇಶದಲ್ಲಿ ಕುಲದೀಪ್ ಸಿಂಗ್ನಿಂದ ಅತ್ಯಾಚಾರಕ್ಕೆ ಒಳಪಟ್ಟ ಸಂತ್ರಸ್ತೆಯನ್ನು ಯೋಗಿ ಸರ್ಕಾರ ನಡೆಸಿಕೊಂಡ ಮಾದರಿಯಲ್ಲೇ ಬಿಜೆಪಿ ಸರ್ಕಾರ ಸಿಡಿ ಯುವತಿಯನ್ನು ನಡೆಸಿಕೊಳ್ಳುತ್ತಿದೆ. ಕೂಡಲೇ ಆರೋಪಿಯನ್ನು ಬಂಧಿಸಿ , ಸಂತ್ರಸ್ತೆ ಯುವತಿಗೆ ನ್ಯಾಯ ಒದಗಿಸಬೇಕೆಂದು ಕಾಂಗ್ರೆಸ್ ಟ್ವೀಟ್ ಮೂಲಕ ಒತ್ತಾಯಿಸಿದೆ.