ಉತ್ತರ ಪ್ರದೇಶ (18-12-2020): ಇಡೀ ದೇಶದಲ್ಲೇ ಚರ್ಚೆಗೆ ಗ್ರಾಸವಾದ ಹತ್ರಾಸ್ ಪ್ರಕರಣದ ಕುರಿತು ನಾಲ್ವರು ಮೇಲ್ಜಾತಿಯ ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ.
ಚಾರ್ಜ್ ಶೀಟ್ ನಲ್ಲಿ ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೊದಲು ಸಂತ್ರಸ್ತೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿಕೊಂಡಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಸಂದೀಪ್, ಲುವ್ ಕೇಶ್, ರವಿ ಮತ್ತು ರಾಮು ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಆರೋಪಿಗಳನ್ನು ಚಾರ್ಜ್ಶೀಟ್ನಲ್ಲಿ ಹೆಸರಿಸಲಾಗಿದೆ ಎಂದು ವಕೀಲರು ಹೇಳಿದ್ದಾರೆ. ಸಿಬಿಐ ಈ ವರದಿಯನ್ನು ವಿಶೇಷ ನ್ಯಾಯಪೀಠದ ಮುಂದೆ ಸಲ್ಲಿಕೆ ಮಾಡಿದೆ.
19 ವರ್ಷದ ದಲಿತ ಯುವತಿ ಮೇಲೆ ಸೆಪ್ಟೆಂಬರ್ 14 ರಂದು ಹತ್ರಾಸ್ನಲ್ಲಿ ನಾಲ್ವರು ಮೇಲ್ಜಾತಿಯ ದುಷ್ಕರ್ಮಿಗಳು ಅತ್ಯಾಚಾರ ಮಾಡಿದ್ದರು. ಘಟನೆ ಬಳಿಕ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮೃತಪಟ್ಟಿದ್ದಳು. ಆ ಬಳಿಕ ಆಕೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಧ್ಯರಾತ್ರಿ ಕುಟುಂಬಸ್ಥರ ವಿರೋಧದ ಮಧ್ಯೆ ಅಂತ್ಯಕ್ರಿಯೆಯನ್ನು ನಡೆಸಿದ್ದರು. ಪ್ರಕರಣ ಇಡೀ ದೇಶದಲ್ಲಿ ಭಾರೀ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಹತ್ರಾಸ್ ಜಿಲ್ಲಾಡಳಿತ ಮತ್ತು ಯೋಗಿ ಸರಕಾರದ ನಡೆ ಪ್ರಕರಣದಲ್ಲಿ ಭಾರೀ ಸಂಶಯವನ್ನು ಹುಟ್ಟುಹಾಕಿತ್ತು.