ಉತ್ತರ ಪ್ರದೇಶ(05-02-2021): ಕಷ್ಟಪಟ್ಟು ಬೆಳೆದ ಹೂಕೋಸು ಬೆಳೆಗೆ ಮಾರುಕಟ್ಟೆಯಲ್ಲಿ 1 ರೂ ಬೆಲೆ ಹಿನ್ನೆಲೆಯಲ್ಲಿ ಬೇಸತ್ತ ಉತ್ತರಪ್ರದೇಶದ ರೈತನೋರ್ವ 10 ಕ್ವಿಂಟಾಲ್ ಹೂಕೋಸುಗಳನ್ನು ರಸ್ತೆಗೆ ಎಸೆದಿರುವ ಘಟನೆ ನಡೆದಿದೆ.
ಕಡಿಮೆ ಬೆಲೆಯಿಂದ ಬೇಸರಗೊಂಡ ಉತ್ತರ ಪ್ರದೇಶದ ರೈತ 10 ಕ್ವಿಂಟಾಲ್ ಹೂಕೋಸುಗಳನ್ನು ರಸ್ತೆಗೆ ಎಸೆದು ಅಗತ್ಯವಿರುವವರಿಗೆ ಅದನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾನೆ.
ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಪರವಾನಗಿ ಪಡೆದ ವ್ಯಾಪಾರಿಗಳು ಮೊಹಮ್ಮದ್ ಸಲೀಮ್ಗೆ ಸುಮಾರು 1000 ಕಿಲೋ ಹೂಕೋಸು ಉತ್ಪನ್ನಗಳಿಗೆ ಪ್ರತಿ ಕೆಜಿಗೆ ಕೇವಲ 1 ರೂ. ನೀಡುವುದಾಗಿ ಹೇಳಿದರು. ಈ ಮೊದಲು ರೈತರು ಪ್ರತಿ ಕೆ.ಜಿ.ಗೆ ಕನಿಷ್ಠ 12 ರಿಂದ 14 ರೂ.ಗಳನ್ನು ಪಡೆಯುತ್ತಿದ್ದರು, ಆದರೆ ಸಲೀಮ್ ಕನಿಷ್ಠ ಇಷ್ಟಾದರೂ ಬೆಲೆ ನಿರೀಕ್ಷಿಸುತ್ತಿದ್ದರು.
ಅವರಿಗೆ 1 ರೂ. ಬೆಲೆಯನ್ನು ಮಾರುಕಟ್ಟೆಯಲ್ಲಿ ಹೇಳಲಾಗಿದೆ. ನಾನು ಅರ್ಧ ಎಕರೆ ಭೂಮಿಯನ್ನು ಹೊಂದಿದ್ದೇನೆ, ಅಲ್ಲಿ ನಾನು ಹೂಕೋಸು ಕೃಷಿ ಮಾಡಿದ್ದೇನೆ. ಬೀಜಗಳು, ಕೃಷಿ, ನೀರಾವರಿ, ರಸಗೊಬ್ಬರಗಳು ಇತ್ಯಾದಿಗಳಿಗಾಗಿ ಸುಮಾರು 8,000 ರೂ. ನನಗೆ ವೆಚ್ಚವಾಗಿದೆ. ನನಗೆ ಮಾರುಕಟ್ಟೆಯಲ್ಲಿ 1 ರೂ ಬೆಲೆ ಹೇಳಿದಾಗ ಬೆಳೆಯನ್ನು ಎಸೆಯುವುದಲ್ಲದೆ ಬೇರೆ ದಾರಿ ಕಾಣಲಿಲ್ಲ ಎಂದು ಸಲೀಂ ಹೇಳಿದ್ದಾರೆ.
ಈ ನಷ್ಟದಿಂದ ನನ್ನ ಕುಟುಂಬ ಹಸಿವಿಗೆ ಬಿದ್ದಿದೆ. ಕುಟುಂಬಕ್ಕೆ ಆಧಾರವಾಗಲು ನನ್ನ ಸಹೋದರ ಮತ್ತು ನಾನು ಈಗ ಕೆಲವು ಕಾರ್ಮಿಕರ ಜೊತೆ ಬೇರೆ ಕೆಲಸ ಮಾಡಬೇಕಿದೆ ಎಂದು ಕಣ್ಣೀರಿಟ್ಟಿದ್ದಾರೆ.