ಲಕ್ನೋ(2-11-2020): ಪ್ರಸಿದ್ಧ ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ಉತ್ತರ ಪ್ರದೇಶದ ಹಝ್ರತ್ ಗಂಜ್ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಫ್ರಾನ್ಸಿನಲ್ಲಿ ನಡೆದ ಹಿಂಸಾಚಾರವನ್ನು ಸಮರ್ಥಿಸಿದ್ದರು ಎಂದು ಆರೋಪಿಸಿ ಕೇಸು ದಾಖಲಿಸಲಾಗಿದ್ದರೂ ಮುನವ್ವರ್ ರಾಣಾ ತನ್ನ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ.
ವಿವಿಧ ಧಾರ್ಮಿಕ ಗುಂಪುಗಳ ನಡುವೆ ವೈರತ್ವ ಮೂಡಿಸುವ ವಿಚಾರದ ಭಾರತೀಯ ದಂಡ ಸಂಹಿತೆ 153 A ಒಳಗೊಂಡು, 295 A, 298A, 305 ಇತ್ಯಾದಿ ವಿಧಿಗಳಡಿಯಲ್ಲಿಯೂ ಕೇಸು ದಾಖಲಿಸಲಾಗಿದೆ. ಹಿಂದಿ ವಾರ್ತಾ ಚಾನಲೊಂದರ ಜೊತೆಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ರಾಣಾ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದು.
ಫ್ರಾನ್ಸಿನಲ್ಲಿ ಬಿಡಿಸಿದ ಅವಹೇಳನಕಾರಿ ವ್ಯಂಗ್ಯಚಿತ್ರ ಮತ್ತು ಬಳಿಕ ನಡೆದ ಹಿಂಸಾಚಾರ ಎರಡನ್ನೂ ಖಂಡಿಸಬೇಕಿದೆ. ಯಾವುದೇ ರೀತಿಯ ಮತಾಂಧತೆಯನ್ನು ಸಮರ್ಥಿಸಲಾಗದು. ಈ ಅರ್ಥದಲ್ಲಿಯೇ ನಾನು ಹೇಳಿಕೆ ನೀಡಿರುವುದು. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎನ್ನುವುದು ರಾಣಾ ಅವರ ಅಭಿಪ್ರಾಯ.