ಬುದ್ಧ ಮತ್ತು ರೂಮಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

-ಹರೀಶ್ ಎಂ ಜಿ

ಬುದ್ಧ ಮತ್ತು ರೂಮಿ ನನ್ನನ್ನು ಅತಿಯಾಗಿ ಆಕರ್ಷಿಸಿದ ವ್ಯಕ್ತಿತ್ವಗಳು. ಜಗತ್ತಿನ ಎಲ್ಲ ಭಾಗದ ಜನರು ಹುಟ್ಟಿನಿಂದಲೇ ಹೇರಲ್ಪಟ್ಟ ಧಾರ್ಮಿಕ, ಸಾಂಸ್ಕೃತಿಕ ಹಾಗು ಪ್ರಾಂತೀಯ ಮಿತಿಗಳನ್ನ ಮೀರಿ ಬುದ್ಧ ಮತ್ತು ರೂಮಿಗೆ ಆಕರ್ಷಿತರಾಗುತ್ತಾರೆ. ಇವರಿಬ್ಬರ ನಡುವೆಯಿರುವ ಸಾಮ್ಯತೆಗಳೇನು? ಭಿನ್ನತೆಗಳೇನು?

ರೂಮಿಯನ್ನ ನೃತ್ಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ರೂಮಿ ಎಂದರೆ ನೃತ್ಯ. ಸತತ ಮೂವತ್ತಾರು ಗಂಟೆಗಳು ಮೈಮರೆತು ನರ್ತಿಸಿದ ನಂತರ ರೂಮಿ ಸಮಾಧಿ ಸ್ಥಿತಿ ಸಾಧಿಸಿದನಂತೆ. ಈ ಸತತ ಹರ್ಷೋತ್ಕಟೆಯ ನೃತ್ಯ ಅವನ ಸುತ್ತಮುತ್ತಲಿನ ಜನರನ್ನ ಕೂಡ ಪ್ರಭಾವಿಸಿ ಅವರೂ ನರ್ತಿಸುವಂತೆ ಮಾಡಿತಂತೆ. ಇದರ ಜೊತೆಗೆ ರೂಮಿ ಹರಿಯ ಬಿಟ್ಟ ಸಂತಸದ ತರಂಗಗಳು ದೂರ ದೂರದಿಂದ ಜನರನ್ನ ಅವನತ್ತ ಸೆಳೆದು, ಅವರೂ ನರ್ತಿಸುತ್ತಾ ಮೈಮರೆತರಂತೆ. ರೂಮಿ ಸಮಾಧಿ ಸ್ಥಿತಿ ಸಾಧಿಸುವಷ್ಟರಲ್ಲಿ ಸಾವಿರಾರು ಜನರು ಅವನೊಡನೆ ನರ್ತಿಸುತ್ತಿದ್ದರಂತೆ. ಸತತವಾಗಿ ನರ್ತಿಸಿ ಕುಡುಕನಂತೆ ಬಿದ್ದಿದ್ದ ರೂಮಿ ಎಚ್ಚರಗೊಂಡ ಮೇಲೆ ಕಂಡ ಪ್ರಪಂಚವೇ ಬೇರೆ…

ರೂಮಿಯ ಕತೆ ಇದಾದರೆ ಏನನ್ನೂ ಮಾಡದೆ ಬೋಧಿ ವೃಕ್ಷದ ಕೆಳಗೆ ನಿಶ್ಚಲನಾಗಿ ಕುಳಿತು ಸಮಾಧಿ ಸ್ಥಿತಿ ಸಾಧಿಸಿದವ ಬುದ್ಧ. ದೂರದಿಂದ ಯಾರಾದರು ಸಮಾಧಿ ಸ್ಥಿತಿಯಲ್ಲಿ ಶಾಂತನಾಗಿಯೂ, ನಿಶ್ಚಲನಾಗಿಯೂ ಕುಳಿತಿದ್ದ ಬುದ್ಧನನ್ನ ನೋಡಿದ್ದರೆ ಅದೊಂದು ಅಮೃತದ ಶಿಲೆಯೆಂದೇ ಅಂದುಕೊಳ್ಳುತ್ತಿದ್ದರೇನೋ! ಬಹುಶಃ ಅದೇ ಕಾರಣಕ್ಕಾಗಿಯೇ ಏನೋ ಬುದ್ಧ ಧ್ಯಾನಸ್ಥನಾಗಿ ಕುಳಿತ ವಿಗ್ರಹಗಳು ಇಂದಿಗೂ ಬಹು ಜನಪ್ರಿಯ. ಆ ನಿಶ್ಚಲತೆ, ತಂಪು, ಬೆಳದಿಂಗಳ ಬಿಳುಪು, ಗಾಢಮೌನ, ನಿರ್ಭಾವುಕ ಮಂದಹಾಸದ ಅರ್ಧ ತೆರೆದ ಕಣ್ಣಿನ ಬುದ್ಧನನ್ನ ನೋಡಿದರೆ ಏನೋ ಹಿತವೆನ್ನಿಸುತ್ತದೆ. ಹೀಗೆ ಕುಣಿತದಿಂದ ರೂಮಿ ಸಮಾಧಿ ಸ್ಥಿತಿ ತಲುಪಿದರೆ, ಬುದ್ಧ ನಿಶ್ಚಲನಾಗಿ ಒಂದೆಡೆ ಕುಳಿತು ಸಮಾಧಿ ಸ್ಥಿತಿ ತಲುಪಿದ.

ರೂಮಿಯೊಬ್ಬ ಸೂಫಿ. ಸೂಫಿ ಪಂಥ ಹುಟ್ಟಿದ್ದು ಮರುಭೂಮಿಯಲ್ಲಿ. ಸೂಫಿಗಳ ನಿತ್ಯದ ಜೀವನದಲ್ಲಿ ಮರುಭೂಮಿ ಎಷ್ಟು ಅದ್ಯವಾಗಿದೆಯೆಂದರೆ ಅವರು ಸದಾ ಮರುಭೂಮಿಯಿಂದ ದೂರವಾಗಿ ಹಸಿರು ಕಣಿವೆ, ಫಲಭರಿತ ಸ್ವರ್ಗ, ಹೂದೋಟಗಳ ಬಗ್ಗೆ ಮಾತನಾಡುತ್ತಾರೆ. ಮದಿರೆ, ಪ್ರಿಯತಮೆಯ ಬಗ್ಗೆ ಹರಟುತ್ತಾರೆ. ಸೂಫಿಗಳು ಮೂಲತಃ ಪಾನಮತ್ತರಾಗಿ ನೃತ್ಯ, ಹಾಡುಗಳಲ್ಲಿ ಮುಳುಗಿ ಮಜುನುಗಳಾಗುತ್ತಾರೆ. ಹಬ್ಬದೂಟ ಉತ್ಸವಗಳಿಲ್ಲದೆ ಸೂಫಿಗಳಿಲ್ಲ. ಸುತ್ತಲೂ ಮರುಭೂಮಿಯಿದ್ದರೂ ಮನದಲ್ಲಿ ಹೂದೋಟ ಬೆಳೆಸಿದವರು ಸೂಫಿಗಳು. ಪ್ರೀತಿ, ಹಾಡು, ಕುಣಿತ, ಸಂತಸದ ಸುಧೆಯನ್ನ ಹರಿಸಿದವರು ಸೂಫಿಗಳು. ಸದಾ ಪಾಸಿಟಿವ್ ಔಟ್ಲುಕ್ ಇರುವ ಮನೋಧರ್ಮ ಇವರದು.

ಬುದ್ಧ ಹುಟ್ಟಿದ್ದು ಗಂಗೆಯ ದಡದಲ್ಲಿ. ಫಲವತ್ತಾದ ಹಸಿರು ಭೂಮಿಯಲ್ಲಿ. ಹಿಮಾಲಯದ ನೆರಳಲ್ಲಿ. ಬುದ್ಧ ಬೆಳೆದಿದ್ದು, ಆಡಿದ್ದು, ಸತ್ಯ ಅರಸಿ ಸಂಚರಿಸಿದ ಮಾರ್ಗವೆಲ್ಲಾ ಹಸಿರೇ. ಎಲ್ಲೆಲ್ಲೂ ನೈಸರ್ಗಿಕ ಸೌಂದರ್ಯ. ಆದರೆ ಬುದ್ಧ ಇಂತಹ ಹೊರಗಿನ ಸೌಂದರ್ಯದಲ್ಲಿ ಸುತ್ತುವರಿದಿದ್ದಾಗಲೂ ತನ್ನೊಳಗೆ ಖಾಲಿತನವನ್ನು, ಮರುಭೂಮಿಯನ್ನ, ಗಾಢಮೌನವನ್ನ ಕಂಡ. ಅತನಲ್ಲಿದ್ದುದು ವಿಸ್ತಾರವಾದ ಶುಭ್ರ ಮರುಭೂಮಿ. ಅಲ್ಲಿ ಕುಣಿತ, ಹಾಡುಗಳಿಗೆ ಅವಕಾಶವಿಲ್ಲ. ಕುಣಿಯುವ ಸೂಫಿಗಳನ್ನ ನೋಡಬಹುದು, ಕುಣಿಯುವ ಬುದ್ಧನನ್ನು ಕಲ್ಪಿಸಿಕೊಳ್ಳಲಾದೀತೆ?

ಮರುಭೂಮಿಯಾದೊಡನೆ ಅದನ್ನ ಬಂಜರು, ಬರುಡು, ಜೀವ ಹೀನವೆಂದು ನೋಡುವ ಅಗತ್ಯವಿಲ್ಲ. ಮರುಭೂಮಿಗೆ ಅದರದೇ ಆದ ವಿಸ್ತಾರವಿದೆ, ಗಾಢಮೌನವಿದೆ, ಮಾದಕ ಏಕಾಂತವಿದೆ, ಶುದ್ಧ ಗಾಳಿಯಿದೆ. ಹಾಗೆಯೇ ಹಸಿರ ಕಣಿವೆಗೂ ಅದರದೇ ಆದ ಸೌಂದರ್ಯವಿದೆ, ಪಕ್ಷಿಗಳ ಇಂಚರವಿದೆ, ಜರಿಯ ಜುಳು ಜುಳು ನಾದವಿದೆ. ರೂಮಿ ತನ್ನೊರಗಿನ ಮರುಭೂಮಿಗೆ ಹೊರತಾದ ಹಸಿರನ್ನು ತನ್ನೊಳಗೆ ಕಟ್ಟಿಕೊಂಡರೆ, ಬುದ್ಧ ತನ್ನೊರಗಿನ ಹಸಿರಿಗೆ ಹೊರತಾದ ಆಕರ್ಷಕ ಮರುಭೂಮಿಯನ್ನ ತನ್ನೊಳಗೆ ಕಟ್ಟಿಕೊಂಡ. ಈ ಒಳಗು-ಹೊರಗಿನ ವೈವಿದ್ಯತೆಯಲ್ಲೇ ಅವರ ವ್ಯಕ್ತಿತ್ವದ ಶಕ್ತಿಯಿದೆಯೆಂದೆನಿಸುತ್ತದೆ. ಈ ಒಳಗು/ ಹೊರಗಿನ ವೈವಿದ್ಯತೆ ಏಕತಾನತೆಯನ್ನೋಡಿಸಿ ಬದುಕು ನೀರಸವಾಗುವುದರಿಂದ ತಪ್ಪಿಸುತ್ತದೆ. ಬುದ್ಧ ನಥಿಂಗ್ನೆಸ್ ಎಂದರೆ, ರೂಮಿ ಎಸ್ ಎಸ್ ಅಂದ. ಬುದ್ಧ ನೆಗೆಟಿವ್ ರೂಮಿ ಪಾಸಿಟಿವ್. ಇಬ್ಬರ ಹಾದಿ ಬೇರೆಬೇರೆಯಾದರು, ಇಬ್ಬರಲ್ಲೂ ಯಾವ ಸಾಮ್ಯತೆಯಿಲ್ಲದಿದ್ದರು, ಅವರು ತಲುಪುವ ಗುರಿಯೊಂದೇ- ಸಮಾಧಿ ಸ್ಥಿತಿ.

ಪೋಲಾರ್ ಅಪೋಸಿಟ್ಗಳಾದ ಗಂಡು-ಹೆಣ್ಣು, ಸಮ್ಮತಿ-ನಿರಾಕರಣೆ, ಭಾವೋದ್ವೇಗ-ಗಾಂಭೀರ್ಯ, ಹಗಲು-ಇರುಳು, ಪ್ರೀತಿ-ದ್ವೇಷ, ಜನನ-ಮರಣ, ಯಿನ್/ಯಂಗ್ನ ಸಂಕೇತಗಳಾಗಿ ನನಗೆ ಬುದ್ಧ ಮತ್ತು ರೂಮಿ ಕಾಣುತ್ತಾರೆ . ಪೋಲಾರ್ ಅಪೋಸಿಟ್ಗಳ ವೈಶಿಷ್ಟ್ಯತೆಯೇನೆಂದರೆ ಅವು ತದ್ವಿರುದ್ಧಗಳಲ್ಲ. ಇಲ್ಲಿ ಒಂದನ್ನು ಬಿಟ್ಟು ಇನ್ನೊಂದು ಇರಲಾರವು. ಒಂದರ ಅಸ್ತಿತ್ವ ಇನ್ನೊಂದರ ಅಸ್ತಿತ್ವಕ್ಕೆ ಪೂರಕವಾಗಿವೆ. ಯಾವ ನದಿಯು ಎರಡು ದಡಗಳಿಲ್ಲದೆ ಹರಿಯಲಾರದು. ಬುದ್ಧ ಅರಿವು, ಪ್ರಜ್ಞೆ, ಧ್ಯಾನ ಹಾಗು ನೇತಿ ಮಾರ್ಗದಲ್ಲಿ ನಡೆದರೆ. ರೂಮಿಯದು ಪ್ರೀತಿ, ಚೈತನ್ಯ ಹಾಗು ಅಫರ್ಮೇಶನ್ ಮಾರ್ಗ.

ಇಷ್ಟೆಲ್ಲಾ ಭಿನ್ನತೆಗಳು ಬುದ್ಧ ಮತ್ತು ರೂಮಿಯಲ್ಲಿದ್ದರೂ ನಮ್ಮೆಲರನ್ನು ಅವರತ್ತ ಆಕರ್ಷಿಸುವ ಸಾಮ್ಯತೆಯೊಂದಿದೆ. ಅವರಿಬ್ಬರೂ ತಮ್ಮ ಒಳವುಗಳನ್ನ ಪರಮ ಸತ್ಯವೆಂದು ಬೇರೆಯವರ ಮೇಲೆ ಹೇರಲಿಲ್ಲ. ತಮಗಾದ ಸುಂದರ ಅನುಭವವನ್ನ ಹಂಚಿಕೊಂಡರಷ್ಟೆ. ತಾವು ನಡೆದ ಮಾರ್ಗದ, ಅನುಸರಿಸಿದ ವಿಧಾನಗಳ ಕುರಿತು ತಿಳಿಸಿದರಷ್ಟೆ. ಅವುಗಳನ್ನೇ ತತ್ವ ಸಿದ್ಧಾಂತವೆಂದು ಪ್ರತಿಪಾದಿಸಲಿಲ್ಲ. ಬೇರೆಯವರ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಿ ತಮ್ಮ ಉಪದೇಶಗಳಿಂದ ಅನುಯಾಯಿಗಳನ್ನ ಸಂಪಾದಿಸಲಿಲ್ಲ, ಯಾರನ್ನೂ ಅಧೀನದಲ್ಲಿರುವಂತೆ ಆದೇಶಿಸಲಿಲ್ಲ. ತಾವು ಅನುಸರಿಸಿದ ಮಾರ್ಗವನ್ನ ಧರ್ಮವನ್ನಾಗಿಸಿ ಪ್ರಚಾರಕ್ಕಿಳಿಯಲಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಗುಣ, ಪ್ರತ್ಯೇಕ ಅಸ್ತಿತ್ವವನ್ನ ಗೌರವಿಸಿದರು. ಈ ಔದಾರ್ಯತೆ, ಸಹಾನುಭೂತಿಯೇ ಅವರ ಜನಪ್ರಿಯತೆಗೆ ಮೂಲ ಕಾರಣವೂ ಕೂಡ.

ಬರಿಯ ಹುಟ್ಟಿನಿಂದಲೇ ಹೇರಿಕೆಯಾದ ಧರ್ಮಗಳಿಂದ ಕುರುಡರಾಗಿ, ವೇದ, ಸಿದ್ದಾಂತ ತತ್ವ ಶಾಸ್ತ್ರಗಳನ್ನ ಆಲಿಸಿ ಬೇರೇನೂ ಕೇಳಿಸದೆ ಸ್ವಂತಿಕೆಯೇ ಇಲ್ಲದೆ ಬದುಕು ಸಾಗಿಸುತ್ತಿರುವ ಮೂಲಭೂತವಾದಿಗಳಿಗೆ, ಧರ್ಮಾಂಧರಿಗೆ ಬುದ್ಧ ರೂಮಿ ಮತ್ತವರು ಅನುಸರಿಸಿದ ಮಾರ್ಗ, ಅವರು ಎಲ್ಲರ ಮೇಲೆ ತೋರಿದ ಸಹಾನುಭೂತಿ, ಹರಡಿದ ಪ್ರೀತಿ ಹಾಗು ಪ್ರತಿಪಾದಿಸಿದ ವೈಯಕ್ತಿಕ ಸ್ವಾತಂತ್ರ್ಯದ ಪ್ರಾಮುಖ್ಯತೆ ಕುರಿತು ಎಲ್ಲರಿಗೂ ತಿಳಿಸುವ ತುರ್ತು ಈಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು