ಬ್ರಹ್ಮಾವರ(05/11/2020): ರಜೆಯಲ್ಲಿ ಊರಿಗೆ ಬಂದಿದ್ದ ಬಿಎಸ್ಎಫ್ ಯೋಧರೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಈ ಬಗ್ಗೆ ಯೋಧರ ಪತ್ನಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾಪತ್ತೆಯಾಗಿರುವ ಯೋಧರು ಮುಂಡ್ಕಿನಜೆಡ್ಡು ಭೈರವ ನಿಲಯದ ವಸಂತ ಕೆ.ನಾಯ್ಕ್ (48)ಆಗಿದ್ದು, ಸದ್ಯ ಶ್ರೀನಗರದಲ್ಲಿ ಬಿಎಸ್ಎಫ್ನ ಗಡಿ ರಕ್ಷಣಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾರೆ.
ರಜೆಯಲ್ಲಿ ಊರಿಗೆ ಬಂದಿದ್ದ ವಸಂತ ಅವರು ನ.3ರಂದು ಬೆಳಗ್ಗೆ 11:15ಕ್ಕೆ ಅವರ ಮೊಬೈಲ್ ಫೋನನ್ನು ಮನೆಯಲ್ಲಿ ಬಿಟ್ಟು ನಡೆದುಕೊಂಡು ಮುಂಡ್ಕಿನಜೆಡ್ಡು ಬಸ್ ನಿಲ್ದಾಣದತ್ತ ತೆರಳಿದ್ದರು. ಅವರು ಅಪರಾಹ್ನ 1:30ರಿಂದ 2 ಗಂಟೆಯವರೆಗೆ ಹೆಬ್ರಿಯ ಪಿಡಿಓ ಅವರ ಕಚೇರಿಯಲ್ಲಿ ಇದ್ದರು ಎಂದು ಪಿಡಿಓ ಅವರು ವಸಂತರ ಮೊಬೈಲ್ಗೆ ಕರೆ ಮಾಡಿ ಅಮಿತಾರಿಗೆ ತಿಳಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ನಂತರ ಅವರು ಮನೆಗೆ ಬಂದಿಲ್ಲ. ಹೀಗಾಗಿ ಬುಧವಾರ ಅಮಿತಾ ಅವರು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.