ಚೆನ್ನೈ(28-02-2021): ಚೆನ್ನೈ ಮೂಲದ ಪ್ರಮುಖ ಟೈಲ್ಸ್ ತಯಾರಿಕಾ ಕಂಪೆನಿಯಲ್ಲಿ 220 ಕೋಟಿ ರೂ. ಕಪ್ಪು ಹಣವನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಕಂಪೆನಿಗೆ ಸಂಬಂಧಿಸಿದ ತಮಿಳುನಾಡು, ಗುಜರಾತ್ ಮತ್ತು ಕೋಲ್ಕತ್ತಾದ ಒಟ್ಟು 20 ಸ್ಥಳಗಳಲ್ಲಿ ಶೋಧಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಇಲಾಖೆ ಹೇಳಿದೆ. ಟೈಲ್ಸ್ ಮತ್ತು ಸ್ಯಾನಿಟರಿವೇರ್ ತಯಾರಿಕೆ ಮತ್ತು ಮಾರಾಟದ ವ್ಯವಹಾರದಲ್ಲಿ ತೊಡಗಿರುವ ಕಂಪೆನಿ ಮೇಲೆ ದಾಳಿ ನಡೆಸಿ 8.30 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಗುಂಪು ದಕ್ಷಿಣ ಭಾರತದಲ್ಲಿ ಟೈಲ್ಸ್ ವ್ಯವಹಾರದಲ್ಲಿ ಪ್ರಮುಖ ಸ್ಥಾನದಲ್ಲಿದೆ. ಶೋಧದ ವೇಳೆ ಅಕ್ರಮ ವ್ಯವಹಾರ ಪತ್ತೆಯಾಗಿದೆ. ಲೆಕ್ಕವಿಲ್ಲದ ವಹಿವಾಟಿನ ವಿವರಗಳನ್ನು ರಹಸ್ಯ ಕಚೇರಿಯಲ್ಲಿ ಪತ್ತೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಕಂಪೆನಿ ವ್ಯವಹಾರದ 50% ಅಕ್ರಮವಾಗಿ ಮಾಡಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಇನ್ನೂ ಕೂಡ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.