ರಾಜ್ಯ ಬಿಜೆಪಿ ಸರ್ಕಾರ ಜನತೆಯ ಜೀವಕ್ಕೆ ಮುಳುವಾಗಿದೆ: ರಾಜ್ಯ ಕಾಂಗ್ರೆಸ್ ಆರೋಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕರೋನಾ ಬಂದು ವರ್ಷ ಕಳೆದಿದೆ, ತಜ್ಞರ ಎಚ್ಚರಿಕೆಗೂ ಹಲವು ತಿಂಗಳುಗಳು ಕಳೆದಿವೆ, ಎಲ್ಲಾ ಸಿದ್ಧತೆಗಳಿಗೂ ಅವಕಾಶಗಳಿದ್ದವು, ಸಮಯವೂ ಇತ್ತು. ಇಷ್ಟಿದ್ದರೂ ಬೇಜವಾಬ್ದಾರಿತನದಿಂದ ನಡೆದುಕೊಂಡು ರಾಜ್ಯದ ಜನತೆಯ ಜೀವಕ್ಕೆ ಮುಳುವಾಗಿದೆ ಸರ್ಕಾರ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್ ಮೂಲಕ ಹದಿಮೂರು ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

1. ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಅವರು ಈ ಪ್ರಶ್ನೆಗಳಿಗೆ ಉತ್ತರಿಸುವ ದೈರ್ಯವಿದೆಯೇ?
ಕಳೆದ ಒಂದು ವರ್ಷದಿಂದಲೂ ಸಂಪುಟ ಗಲಾಟೆ, ಆಂತರಿಕ ಕಿತ್ತಾಟ, ಭ್ರಷ್ಟಾಚಾರ, ಸಿಡಿ ಗಲಾಟೆಯಲ್ಲಿಯೇ ಮುಳುಗಿದ ಸರ್ಕಾರ ಕರೋನಾ ಎದುರಿಸಲು ವೈದ್ಯಕೀಯ ಕ್ಷೇತ್ರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರಲಿಲ್ಲ ಏಕೆ?

2. ಚಾಮರಾಜನಗರವೂ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಆಕ್ಸಿಜನ್ ಕೊರತೆಯಿಂದ ಹಲವು ಮಂದಿ ಸಾವನಪ್ಪಿದ್ದಾರೆ, ಆಕ್ಸಿಜನ್ ಪೂರೈಸದಿರುವುದು ಸರ್ಕಾರದ ಬಹುದೊಡ್ಡ ವೈಫಲ್ಯ, ಇಷ್ಟಾದರೂ ಈ ದುರ್ಘಟನೆಗಳಿಗೆ ಯಾವೊಬ್ಬ ಸಚಿವರೂ ಹೊಣೆ ಹೊರಲಿಲ್ಲ ಏಕೆ?

3. ಆರೋಗ್ಯ ಸಚಿವರು ಸುಳ್ಳು ಹೇಳಿದರೂ ಅವರ ರಾಜೀನಾಮೆ ಪಡೆಯಲಿಲ್ಲ ಏಕೆ ಬಿ.ಎಸ್.ವೈ ಅವರೇ?
ರಾಜ್ಯಕ್ಕೆ ದಿನವೊಂದಕ್ಕೆ ಸುಮಾರು 1800 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ ಎಂದು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತವೆ, ವಾಸ್ತವದಲ್ಲಿ ಇನ್ನೂ ಹೆಚ್ಚಿದೆ.
ಇದನ್ನು ಪೂರೈಸಲು ಸರ್ಕಾರಕ್ಕೆ ಕಾಳಜಿ ಇಲ್ಲವೇ, ಕೋರ್ಟುಗಳೇ ಚಾಟಿ ಬೀಸಬೇಕೇ?

4. ಕೋರ್ಟುಗಳ ನಿರ್ದೇಶನದ ನಂತರವೂ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಪೂರೈಸದಿರುವುದೇಕೆ? ಲಸಿಕೆ ವಿಚಾರದಲ್ಲಿ.ರಾಜ್ಯ ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಚಾರಕ್ಕಾಗಿ ಲಸಿಕೆ ಉತ್ಸವ ಎಂಬ ಬೂಟಾಟಿಕೆ ಆಡಿದ್ದೇಕೆ? ಜನತೆಯನ್ನು ಗೊಂದಲಕ್ಕೆ ದೂಡಿದ್ದೇಕೆ?
ಲಸಿಕೆ ತರಿಸಿಕೊಳ್ಳದೆಯೇ, ಆರ್ಡರ್ ಮಾಡದೆಯೇ ಕುಳಿತಿದ್ದೇಕೆ? ಲಸಿಕೆ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ ಪ್ರಶ್ನಿಸದೆ 25 ಸಂಸದರು ಅಡಗಿ ಕುಳಿತಿದ್ದೆಲ್ಲಿ?

5. ಚುನಾವಣಾ ಭಾಷಣಗಳಲ್ಲಿ ಡಬಲ್ ಇಂಜಿನ್ ಸರ್ಕಾರ ಸ್ವರ್ಗ ಕಾಲು ಮುರಿದುಕೊಂಡು ಕರ್ನಾಟಕದಲ್ಲಿಯೇ ಬಿದ್ದಿರುತ್ತದೆ ಎಂದು ಪುಂಖಾನುಪುಂಖವಾಗಿ ಮಾತನಾಡಿದ ಬಿಜೆಪಿ ನಾಯಕರು ರಾಜ್ಯದ ಜನತೆಯ ಪ್ರಾಣ ಹೋಗುತ್ತಿದ್ದರೂ ಈಗ ನೋಟ್ ಪ್ರಿಂಟ್ ಮಾಡಲ್ಲ, ನೇಣು ಹಾಕ್ಕೋಬೇಕಾ ಎಂಬ ಮಾತುಗಳನ್ನ ಆಡುತ್ತಿರುವುದೇಕೆ?

6. ಡಕೋಟಾ ಇಂಜಿನ್ ಅಂತ ಈಗ ಅರಿವಾಯಿತೆ?!
ಮುಖ್ಯಮಂತ್ರಿ ಬಿ.ಎಸ್.ವೈ ಅವರೇ, ನಿಮ್ಮದೆಂತಹಾ ಆಮೆ ನಡಿಗೆಯ ಸರ್ಕಾರವೆಂದರೆ ಸಮಸ್ಯೆಗಳು, ಕೊರತೆಗಳು ತಲೆದೂರಿ ಹಲವು ದಿನಗಳ ಬಳಿಕ ಕೊರತೆಗಳ ನಿರ್ವಹಣೆಗೆಂದು ಕರೋನಾ ಸಚಿವರುಗಳನ್ನು ನೇಮಿಸಿದಿರಿ. ಅವರು ನಾಮಕಾವಸ್ಥೆಗಷ್ಟೇ ಇರುವುದು ಎಂದು ಇಷ್ಟು ದಿನ ಕಳೆದರೂ ಕೊರತೆಗಳು ಬಗೆಹರಿಯದಿರುವುದು ತಿಳಿಸುತ್ತದೆ.

7. ಏಕೆ ಈ ಅಸಾಮರ್ಥ್ಯ ಮುಖ್ಯಮಂತ್ರಿ ಅವರೇ?
ಕಾಳ ಸಂತೆ ನಿಗ್ರಹಿಸಲು ಗೃಹ ಇಲಾಖೆ, ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿವೆ. ಕಾಳದಂಧೆಕೊರರು ಜೀವ ರಕ್ಷಕ ಔಷಧಗಳ ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಾ ತಿಂಗಳು ಕಳೆದಿದೆ, ಇದುವರೆಗೂ ಅದನ್ನು ತಡೆಯುವ ಗಂಭೀರ ಪ್ರಯತ್ನ ಮಾಡಲಿಲ್ಲವೇಕೆ? ರಾಜ್ಯ ಬಿಜೆಪಿ ಪಕ್ಷವೂ ಅದರಲ್ಲಿ ಭಾಗಿಯೇ?

8. ರಾಜ್ಯದಲ್ಲೂ ಬಿಜೆಪಿ, ಕೇಂದ್ರದಲ್ಲೂ ಬಿಜೆಪಿ, 25 ಸಂಸದರೂ ಬಿಜೆಪಿ, ಹೀಗಿರುವಾಗ ಕೇಂದ್ರ ಸರ್ಕಾರ ಗುಜರಾತಿಗೆ ನ್ಯಾಯ, ಕರ್ನಾಟಕಕ್ಕೆ ಆನ್ಯಾಯ ಮಾಡುತ್ತಿರುವುದನ್ನು ಪ್ರಶ್ನಿಸದೆ ಇರುವುದೇಕೆ? ಕರ್ನಾಟಕಕ್ಕೆ ಆಕ್ಸಿಜನ್ ಕೊಡುವುದೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ರಾಜ್ಯ ಸರ್ಕಾರ ಬಾಯಿಮುಚ್ಚಿ ಕುಳಿತಿದ್ದೇಕೆ?

9. ಬೆಡ್‌ಗಳಿಗೆ ಹಾಹಾಕರವೆದ್ದಿದೆ, ಕಳೆದ ವರ್ಷ ಸ್ಥಾಪಿಸಿದ್ದ ಏಷ್ಯದಲ್ಲೇ ಅತಿ ದೊಡ್ಡದು ಎಂದು ಪ್ರಚಾರ ಮಾಡಿಕೊಂಡಿದ್ದ 10,000 ಬೆಡ್‌ಗಳ ಕೋವಿಡ್ ಸೆಂಟರ್ ಬಗ್ಗೆ ತುಟಿ ಬಿಚ್ಚುತ್ತಿಲ್ಲವೇಕೆ? ಬಳಸದೆ ಮುಚ್ಚಿದ್ದೇಕೆ? ಅದರಲ್ಲಿ ಎಷ್ಟು ಲೂಟಿ ಹೊಡೆಯಲಾಯ್ತು? ಈ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆ ಅದನ್ನು ಮರುಸ್ಥಾಪಿಸುವ ಕೆಲಸ ಮಾಡಲಿಲ್ಲವೇಕೆ?

10. 2ನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆಯ ನಂತರವೂ ಸರ್ಕಾರ ಆ ಬಗ್ಗೆ ಚಿಂತಿಸದೆ ಕರೋನಾ ಗೆದ್ದೇಬಿಟ್ಟೆವು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡು ಆತ್ಮರತಿಯಲ್ಲಿ ಮುಳುಗಿತ್ತು. 2ನೇ ಅಲೆಯ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬರುತ್ತಿದ್ದವು, ಇತರ ರಾಜ್ಯಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದರೂ ಸರ್ಕಾರ ಎಚ್ಚರಾಗದಿದ್ದುದು ಏಕೆ?

11. ಲಾಕ್‌ಡೌನ್ ಬಗ್ಗೆ ಸರ್ಕಾರದಲ್ಲೇ ಸ್ಪಷ್ಟತೆ ಇಲ್ಲದೆ, ಸಮನ್ವಯತೆ ಇಲ್ಲದೆ ದಿನಕ್ಕೊಂದು ಹೇಳಿಕೆ ನೀಡುತ್ತಾ ಜನತೆಯನ್ನು ಗೊಂದಲಕ್ಕೆ ದೂಡಿದ್ದಿರಿ. ಏಕಾಏಕಿ ಘೋಷಣೆ ಮಾಡಿ ವಲಸಿಗರರನ್ನು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಪರೀಕ್ಷೆ ನಡೆಸದೆ ಹಳ್ಳಿಗಳಿಗೆ ತೆರಳಲು ಬಿಟ್ಟಿರಿ. ಈಗ ಗ್ರಾಮೀಣ ಭಾಗದ ಸೋಂಕಿಗೆ ನೀವೇ ಹೊಣೆಯಲ್ಲವೇ?

12. ಈಗಾಗಲೇ ಬ್ಲಾಕ್ ಫ‌ಂಗಸ್ ಸೋಂಕು ವ್ಯಾಪಕವಾಗುತ್ತಿದೆ, ಇದನ್ನು ನಿಗ್ರಹಿಸುವ ಬಗ್ಗೆ ಯಾವ ತಜ್ಞರ ಸಭೆಯನ್ನೂ ನಡೆಸದೆ ನಿದ್ದೆ ಮಾಡುತ್ತಿರುವುದೇಕೆ? ಕರೋನಾ 3ನೇ ಅಲೆಯ ಬಗ್ಗೆ ತಜ್ಞರು ಗಂಭೀರವಾಗಿ ಎಚ್ಚರಿಸಿದ್ದಾರೆ, ಅದನ್ನು ಎದುರಿಸುವ ಬಗ್ಗೆ ಯಾವ ಕಾರ್ಯತಂತ್ರವಿದೆ? ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಹದಿಮೂರು ಪ್ರಶ್ನೆಗಳು ಕೇಳುವ ಮೂಲಕ ತರಾಟೆಗೆ ತೆಗೆದುಕೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು