ಸೇಲಂ: ಬಿಜೆಪಿಗೆ ವಿರುದ್ಧವಾಗಿ ತಮಿಳುನಾಡು ಮಾದರಿಯ ಮೈತ್ರಿಕೂಟವನ್ನು, ಭಾರತ ಒಕ್ಕೂಟ ಮಟ್ಟದಲ್ಲಿ ರಚಿಸಲು ರಾಹುಲ್ ಗಾಂಧಿಗೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸಲಹೆ ನೀಡಿದ್ದಾರೆ.
ಭಾರತ ಒಕ್ಕೂಟ ಮಟ್ಟದಲ್ಲಿ ತಮಿಳುನಾಡಿನಲ್ಲಿರುವಂತೆ ಬಿಜೆಪಿಗೆ ವಿರುದ್ಧವಾಗಿ ರಚಿಸಲಾದ ಮೈತ್ರಿಕೂಟ ಇಲ್ಲ. ಹಾಗಾಗಿ ಇಂತಹ ಮೈತ್ರಿಕೂಟ ರಚಿಸುವತ್ತ ರಾಹುಲ್ ಗಾಂಧಿ ಗಮನ ಹರಿಸಬೇಕೆಂಬುದೇ ಅವರ ಸಲಹೆ.
ಎಪ್ರಿಲ್ ಆರರಂದು ತಮಿಳುನಾಡು ವಿಧಾನಸಭಾ ಚುನಾವಣೆ ಆರಂಭವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ತಮಿಳುನಾಡಿನಾದ್ಯಂತ ಚುನಾವಣಾ ರ್ಯಾಲಿಗಳು ನಡೆಯುತ್ತಿವೆ. ಇಂತಹ ರ್ಯಾಲಿಯಲ್ಲಿ ಮಾತನಾಡುತ್ತಿರುವ ವೇಳೆಯಲ್ಲಿ ಸ್ಟಾಲಿನ್ ಅವರು ಈ ಸಲಹೆ ನೀಡಿದ್ದಾರೆ.
ತಮಿಳುನಾಡಿನ ವಿರುದ್ಧ ಬಿಜೆಪಿ ನೇತೃತ್ವದ ಸರಕಾರವು ಸಾಂಸ್ಕೃತಿಕ ಮತ್ತು ರಾಜಕೀಯ ದಾಳಿಗಳನ್ನು ನಡೆಸುತ್ತಿದೆ. ಫ್ಯಾಸಿಸ್ಟ್ ಸರಕಾರದ ದೆಸೆಯಿಂದ ದೇಶದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಜನರನ್ನು ರಕ್ಷಿಸುವ ದೊಡ್ಡ ಜವಾಬ್ಧಾರಿ ರಾಹುಲ್ ಗಾಂಧಿ ಅವರ ಹೆಗಲ ಮೇಲಿದೆ ಎಂದು ಸ್ಟಾಲಿನ್ ಹೇಳಿದರು.
ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಇಬ್ಬರೂ ರಾಜ್ಯದ ಜನರ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ. ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಪಡಿಸಿ ಹಣ ಸಂಪಾದಿಸುವುದರ ಬಗೆಗಷ್ಟೇ ಅವರು ಯೋಚಿಸುತ್ತಿದ್ದಾರೆ. ಇಬ್ಬರೂ ಕೇಂದ್ರ ಸರಕಾರ ಮತ್ತು ಬಿಜೆಪಿಯ ಗುಲಾಮರಾಗಿದ್ದಾರೆ ಎಂದು ಇದೇ ವೇಳೆ ಸ್ಟಾಲಿನ್ ಆರೋಪಿಸಿದರು.