ಕೋಲ್ಕತಾ(09-11-2020): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೆಂಬಲಿಗರಿಗೆ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಭಾನುವಾರ ಎಚ್ಚರಿಕೆ ನೀಡಿದ್ದು, ಕೈ ಕಾಲುಗಳನ್ನು ಮುರಿಯಬೇಕಾಗುತ್ತೆ ಅಥವಾ ಕೊಲೆಯೂ ಆಗಬಹುದು ಎಂದು ಹೇಳಿಕೆ ನೀಡಿದ್ದಾರೆ.
ನಮಗೆ ತೊಂದರೆ ಸೃಷ್ಟಿಸುತ್ತಿರುವ ದೀದಿ ಸಹೋದರರು ಮುಂದಿನ 6 ತಿಂಗಳಲ್ಲಿ ತಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು ಇಲ್ಲದಿದ್ದರೆ ನಿಮ್ಮ ತೋಳು, ಕಾಲು, ಪಕ್ಕೆಲುಬು ಮತ್ತು ತಲೆ ಮುರಿದುಹೋಗುತ್ತದೆ. ನೀವು ಆಸ್ಪತ್ರೆಗೆ ಸೇರಬೇಕಾಗುತ್ತದೆ. ಮತ್ತು ಅದಕ್ಕಿಂತ ಹೆಚ್ಚಿನದನ್ನು ಮಾಡಿದರೆ, ನಂತರ ನೀವು ಶ್ಮಶಾನಕ್ಕೆ ಹೋಗಬೇಕಾಗುತ್ತದೆ ಎಂದು ಘೋಷ್ ಹಲ್ಡಿಯಾದಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.
ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ತೀವ್ರ ಪೈಪೋಟಿಯಲ್ಲಿದೆ. ರಾಜಕೀಯ ಹಿಂಸಾಚಾರ ಮತ್ತು ಪರಸ್ಪರ ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಎರಡೂ ಕಡೆಯವರು ಆರೋಪಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಂಗಾಳ ಭೇಟಿಯ ಎರಡು ದಿನಗಳ ನಂತರ ದಿಲೀಪ್ ಘೋಷ್ ಅವರ ಹೇಳಿಕೆ ಬಂದಿದೆ. ಬಿಜೆಪಿ ಪ.ಬಂಗಾಳದಲ್ಲಿ 294 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿವೆ ಎನ್ನಲಾಗಿದೆ.