ಬಿಜೆಪಿ ಅವರಂತೆ ನಾವು ಹಣ ಹಂಚಿ ಮತ ಕೇಳುತ್ತಿಲ್ಲ, ಐದು ವರ್ಷದ ದುಡಿಮೆಗೆ ಕೂಲಿಯ ರೂಪದಲ್ಲಿ ಮತ ಕೇಳುತ್ತಿದ್ದೇವೆ : ಸಿದ್ದರಾಮಯ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹಾನಗಲ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಯಾವುದಾದರೂ ಒಂದು ಜನಪರ ಯೋಜನೆಯ ಹೆಸರು ಹೇಳಲಿ ನೋಡೋಣ. ಅವರಿಂದ ಸಾಧ್ಯವಿದೆಯಾ? ತಮ್ಮ ಬಣ್ಣ ಬಯಲಾಗುತ್ತೆ ಎಂದು ಹೆದರಿ ಅವರು ಒಂದೇ ವೇದಿಕೆಗೆ ಚರ್ಚೆಗೆ ಬರಲು ನಿರಾಕರಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಹಾನಗಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

2013 ರ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಅವರು 74,000 ಮತಗಳನ್ನು ಪಡೆದು ಕೇವಲ 6,000 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕೊನೆ ಘಳಿಗೆಯಲ್ಲಿ ಅವರನ್ನು ಅಭ್ಯರ್ಥಿ ಎಂದು ಘೋಷಿಸಿ, ಅವರಿಗೆ ಅಗತ್ಯ ಸಮಯಾವಕಾಶ ನೀಡದೆ ಇದ್ದದ್ದು ಸೋಲಿಗೆ ಕಾರಣವಾಗಿತ್ತು. ಚುನಾವಣೆಯಲ್ಲಿ ಸೋತೆ ಎಂದು ಮನೆಯಲ್ಲಿ ಕೂರದೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಜನರ ಜೊತೆಗಿದ್ದು, ಅವರ ಕಷ್ಟ ಸುಖಗಳನ್ನು ಕೇಳಿ ತಮ್ಮ ಕೈಲಾದ ಸಹಾಯ ಮಾಡಿರುವ ಕಾರಣಕ್ಕೆ ಇಂದು ಶ್ರೀನಿವಾಸ್ ಮಾನೆ ಅವರನ್ನು ಕ್ಷೇತ್ರದ ಜನ ಅಪದ್ಭಾಂದವ ಎಂದು ಕರೆಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ನಾವು ಅಧಿಕಾರದಲ್ಲಿ ಇದ್ದಾಗ ಜನರಿಗೆ ನೀಡಿದ್ದ 165 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರೈತರ ಸಾಲಮನ್ನಾ, ಕ್ಷೀರಧಾರೆ, ಕ್ಷೀರಭಾಗ್ಯ, ಅನ್ನಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಬಿಜೆಪಿ ಅವರಂತೆ ನಾವು ಹಣ ಹಂಚಿ ಮತ ಕೇಳುತ್ತಿಲ್ಲ. ಅಧಿಕಾರದಲ್ಲಿ ಇದ್ದಾಗ ಐದು ವರ್ಷ ನಿಮಗಾಗಿ ದುಡಿದಿದ್ದೇವೆ, ನಮ್ಮ ದುಡಿಮೆಗೆ ಕೂಲಿಯ ರೂಪದಲ್ಲಿ ಮತ ಕೊಡಿ ಎಂದು ಕೇಳುತ್ತಿದ್ದೇವೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಲ್ವಾ?

ಚುನಾವಣೆ ಕಾರಣಕ್ಕೆ ಬಸವರಾಜ ಬೊಮ್ಮಾಯಿಯವರು ಹಾನಗಲ್ ಗೆ 7400 ಮನೆಗಳನ್ನು ಮಂಜೂರು ಮಾಡಿ ಆದೇಶ ಪತ್ರ ಹಿಡಿದುಕೊಂಡು ಮತ ಕೇಳುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಒಂದು ಮನೆಯನ್ನು ಕಟ್ಟಿಸಿಕೊಡಲ್ಲ. ಇದು ಬರೀ ಚುನಾವಣಾ ಗಿಮಿಕ್ ಅಷ್ಟೆ ಎಂದು ಟೀಕಿಸಿದ್ದಾರೆ.

ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿಯವರು ಅಂಜುಮಾನ್ ಸಂಸ್ಥೆಯವರಿಗೆ 5 ಲಕ್ಷ ರೂಪಾಯಿ ಹಣ ಕೊಟ್ಟು ಅಲ್ಪಸಂಖ್ಯಾತ ಸಮುದಾಯದವರು ಬಿಜೆಪಿಗೆ ಮತ ಹಾಕಲ್ಲ ಎಂದು ಗೊತ್ತು, ನಮಗೆ ಮತ ನೀಡದಿದ್ದರೂ ಪರವಾಗಿಲ್ಲ ಜೆಡಿಎಸ್ ಗೆ ಹಾಕಿ ಎಂದು ಹೇಳಿದ್ದಾರೆ.
ಬಿಜೆಪಿಯವರ ಹಣ ಹಾಗೂ ಸುಳ್ಳು ಭರವಸೆಗಳನ್ನು ನಂಬದೆ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಆಶೀರ್ವದಿಸಬೇಕು ಎಂದು ಸಿದ್ದರಾಮಯ್ಯ ಅವರು ಮತದಾರರಿಗೆ ಮನವಿ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು