ಪಾಟ್ನಾ (16-11-2020): ಬಿಹಾರದಲ್ಲಿ ಎನ್ ಡಿಎ ಮೈತ್ರಿಗೆ ಬಹುಮತ ಬಂದ ಹಿನ್ನೆಲೆಯಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಇಂದು ಸಿಎಂ ಆಗಿ ಪ್ರಮಾಣವಚನವನ್ನು ಸ್ವೀಕರಿಸಲಿದ್ದು, ಅವರ ಜೊತೆ ಬಿಜೆಪಿಯ ಇಬ್ಬರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕತಿಹಾರ್ ಶಾಸಕ ತಾರಕೇಶ್ವರ ಪ್ರಸಾದ್ ಮತ್ತು ಶಾಸಕಿ ರೇಣು ದೇವಿ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಇವರ ಜೊತೆಗೆ 12 ಹೆಚ್ಚುವರಿ ಶಾಸಕರು ಇಂದು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೂಲಗಳ ಪ್ರಕಾರ ಸರಕಾರದಲ್ಲಿ 43 ಶಾಸಕರನ್ನು ಹೊಂದಿರುವ ಜೆಡಿಯು 12 ಮಂತ್ರಿಸ್ಥಾನಗಳನ್ನು ಮತ್ತು 74 ಶಾಸಕರನ್ನು ಹೊಂದಿರುವ ಬಿಜೆಪಿ 18 ಸಚಿವ ಸ್ಥಾನಗಳನ್ನು ಪಡೆಯಲಿದೆ. ಇನ್ನು ಎನ್ ಡಿಎ ಭಾಗವಾಗಿರುವ ವಿಕಾಶಶೀಲ ಇನ್ಸಾನ್ ಪಕ್ಷಕ್ಕೆ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚ ಪಕ್ಷಗಳಿಗೆ ತಲಾ ಒಂದು ಸಚಿವ ಸ್ಥಾನ ಸಿಗಲಿದೆ.