ಪಾಟ್ನಾ(10/11/2020): ಬಿಹಾರ ಚುನಾವಣಾ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದೆ. ರೋಚಕ ಪಂದ್ಯದ ಅನುಭವ ನೀಡುತ್ತಿದೆ. ಈಗಿನ ಟ್ರೆಂಡ್ ಗಮನಿಸಿದರೆ ವಿಜಯ ಲಕ್ಷ್ಮಿ ಎನ್ ಡಿಎ ಪಾಲಾಗುತ್ತಾಳೋ, ಮಹಾ ಘಟನ ಬಂಧನ ಪಾಲಾಗುತ್ತಾಳೋ ಎಂದು ಸ್ಪಷ್ಟವಾಗಿ ಹೇಳುವಂತಿಲ್ಲ. ಆದರೂ, ಮಹಾಘಟಬಂಧನ ಪ್ರಮುಖ ಪಕ್ಷವಾಗಿರುವ ಆರ್ ಜೆಡಿಯ ಮುನ್ನಡೆ ಗಮನಿಸಿದರೆ ಈ ಚುನಾವಣೆಯ ನಿಜವಾದ ಹೀರೋ ತೇಜಸ್ವಿ ಯಾದವ್ ಎಂಬುದರಲ್ಲಿ ಸಂಶಯವಿಲ್ಲ.
ತೇಜಸ್ವಿ ಯಾದವ್ ಆರದ ಜೆಡಿ ಮುಖ್ಯಸ್ಥ ಹಾಗೂ ಸದ್ಯ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಪಾಲಾಗಿರುವ ಲಾಲು ಪ್ರಸಾದ್ ಅವರ ಪುತ್ರ. ಚುನಾವಣಾ ಪ್ರಚಾರದುದ್ದಕ್ಕೂ ಅವರು ತಮ್ಮ ತಂದೆಯನ್ನು ಜೈಲಿಗಟ್ಟಿರುವುದರ ಬಗ್ಗೆ ಮಾತನಾಡಿಲ್ಲ. ಬಡತನ, ಕಾರ್ಮಿಕರ ಸಮಸ್ಯೆ, ಕೋಮುವಾದ ಇವುಗಳ ಬಗ್ಗೆ ಮಾತನಾಡಿ ಜನರ ಗಮನ ಸೆಳೆಯುತ್ತಿದ್ದರು. ಮಹಾಘಟಬಂಧನದ ನಾಯಕತ್ವವನ್ನು ವಹಿಸಿ ಏಕಾಂಗಿಯಾಗಿ ಮುನ್ನಡೆಸಿದ್ದಾರೆ.
ಅವರ ಪ್ರಚಾರ ಸಭೆಗಳಿಗೆ ಮೋದಿಯ ಸಭೆಗಳಿಗಿಂತಲೂ ಹೆಚ್ಚು ಜನರು ಭಾಗವಹಿಸುತ್ತಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸುತ್ತದೆ. ಅಷ್ಟರ ಮಟ್ಟಿಗೆ ಅವರು ಬಿಹಾರದ ಭವಿಷ್ಯದ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಲ್ಲಿಯ ಜನರು ಅವರನ್ನು ಭವಿಷ್ಯದ ನಾಯಕನಾಗಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ.
ತೇಜಸ್ವಿ ಯಾದವ್ ಸಮಚಿತ್ತದ ಮಾತುಗಾರಿಕೆಯ ಮೂಲಕ ರಾಜಕೀಯ ವಿಶ್ಲೇಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಿತೀಶ್ ಕುಮಾರ್ ಅವರ ವೈಯಕ್ತಿಕ ಮಟ್ಟದ ದಾಳಿಗಳನ್ನು ಅವರು ಸಂಯಮದಿಂದ ಎದುರಿಸಿದ್ದಾರೆ. ಎಲ್ಲೂ ಆಕ್ರೋಶಭರಿತರಾಗಿದ್ದೋ, ಎಲ್ಲೆ ಮೀರಿದ್ದೋ ಕಾಣಲು ಸಾಧ್ಯವಿಲ್ಲ. ನಾಳೆ ಅವರು ಮುಖ್ಯಮಂತ್ರಿ ಆಗ್ತಾರೋ ಬಿಡ್ತಾರೋ ಗೊತ್ತಿಲ್ಲ; ಆದರೆ, ಅವರು ಈ ಚುನಾವಣೆಯ ರಿಯಲ್ ಹೀರೋ ಆಗಿಹೊರಹೊಮ್ಮಲಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.