ಅಮೆರಿಕಾ(21-01-2021): ಜೋ ಬಿಡೆನ್ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಮುಸ್ಲಿಮರಿಗೆ ವಿಧಿಸಿದ್ದ ಪ್ರಯಾಣ ನಿಷೇಧವನ್ನು ವಾಪಾಸ್ಸು ತೆಗೆದುಕೊಂಡಿದ್ದಾರೆ.
ಹಲವಾರು ಪ್ರಮುಖ ಮುಸ್ಲಿಂ ಮತ್ತು ಆಫ್ರಿಕನ್ ದೇಶಗಳಿಂದ ತೆರಳದಂತೆ ಅಮೆರಿಕಕ್ಕೆ ಪ್ರಯಾಣ ನಿರ್ಬಂಧವನ್ನು ಟ್ರಂಪ್ ವಿಧಿಸಿದ್ದರು.
ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳ ನಂತರ, ಬಿಡೆನ್ 17 ಕಾರ್ಯನಿರ್ವಾಹಕ ಆದೇಶಗಳ ಜ್ಞಾಪಕ ಪತ್ರಗಳಿಗೆ ಸಹಿ ಹಾಕಿದ್ದಾರೆ.
ನಿರ್ಬಂಧಿತ ದೇಶಗಳ ವ್ಯಕ್ತಿಗಳಿಗೆ ವೀಸಾ ಪ್ರಕ್ರಿಯೆಯನ್ನು ಪುನರಾರಂಭಿಸಲು ಮತ್ತು ನಿಷೇಧದಿಂದಾಗಿ ಉಂಟಾದ ಹಾನಿಗೆ ಸ್ಪಂದಿಸುವಂತೆ ಜೋ ಬಿಡೆನ್ ಸೂಚಿಸಿದ್ದಾರೆ.
ಟ್ರಂಪ್ ಅಧಿಕಾರ ವಹಿಸಿಕೊಂಡ ಮೊದಲ ವಾರದಲ್ಲಿ 2017 ರಲ್ಲಿ ಜಾರಿಗೆ ಬಂದ ಮುಸ್ಲಿಂ ನಿಷೇಧವು ಆರಂಭದಲ್ಲಿ ಏಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಪ್ರಯಾಣವನ್ನು ನಿರ್ಬಂಧಿಸಿತ್ತು. ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ದೇಶಗಳಿಗೆ ನಿರ್ಬಂಧವನ್ನು ಟ್ರಂಪ್ ವಿಧಿಸಿದ್ದರು. ಬಳಿಕ ನೈಜೀರಿಯಾ, ಮ್ಯಾನ್ಮಾರ್, ಎರಿಟ್ರಿಯಾ, ಸುಡಾನ್, ತಾಂಜಾನಿಯಾ ಮತ್ತು ಉತ್ತರ ಕೊರಿಯಾ ಸೇರಿ 12 ದೇಶಗಳಿಗೆ ಅಮೆರಿಕಾಗೆ ತೆರಳದಂತೆ ನಿಷೇಧವನ್ನು ಹೇರಿದ್ದರು.