ವಿಶೇಷ ವರದಿ: ಜಗತ್ತಿನ ಕಣ್ಣು ಅಮೇರಿಕಾದ ಕಡೆಗೆ | ಆ ನಲವತ್ತಾರನೇಯ ಅಧ್ಯಕ್ಷ ಯಾರು?

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್, ಡಿ.ಸಿ (3-11-2020): ಜಗತ್ತಿನ ತೀವ್ರ ಕುತೂಹಲಕ್ಕೆ ಕಾರಣವಾಗುವ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಜಯಗಳಿಸಬಹುದು ಎಂದು ಇಂದು ಜನರು ತೀರ್ಮಾನಿಸಲಿರುವರು. ಒಂದು ವರ್ಷಕ್ಕೂ ಹೆಚ್ಚು ದೀರ್ಘಾವಧಿಯ ಅಮೇರಿಕಾ ಸಂಕೀರ್ಣವಾದ ಚುನಾವಣಾ ಪ್ರಕ್ರಿಯೆ ಇಂದು ಕೊನೆಗೊಳ್ಳಲಿದೆ.

ಮತದಾನದ ಪ್ರಮಾಣ

ಈಗಾಗಲೇ ಹತ್ತು ಕೋಟಿ ಜನರು ಮತದಾನ ಮಾಡಿದ್ದು, ಅದರಲ್ಲಿ ನಾಲ್ಕು ಕೋಟಿ ಜನರು ಮತದಾನ ಬೂತಿಗೆ ನೇರವಾಗಿ ತೆರಳಿ ಮತದಾನ ನಡೆಸಿದರು. ಇನ್ನು ಆರು ಕೋಟಿ ಜನರು ಅಂಚೆಯ ಮೂಲಕ ಮತ ಚಲಾಯಿಸಿದರು. ಹತ್ತಿರ ಹತ್ತಿರ ಐವತ್ತು ಶೇಕಡಾದಷ್ಟು ಮತದಾನ ಈಗಾಗಲೇ ನಡೆದಿರುವುದಾಗಿ ವರದಿಯಾಗಿದೆ.

ಈ ಬಾರಿಯ ಚುನಾವಣೆಯ ಕಾವು ಹಿಂದೆಂದೂ ಕಂಡರಿಯದಷ್ಟು ಏರತೊಡಗಿದೆ. ಈ ವರೆಗಿನ ಎಲ್ಲಾ ದಾಖಲೆಗಳನ್ನು ಮೀರಿ, ಸುಮಾರು ಅರುವತ್ತಾರು ಶೇಕಡಾ ಮತದಾನವಾಗುವ ಸಾಧ್ಯತೆಯಿದೆಯೆಂದು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವರೆಗೆ ನಡೆದವುಗಳಲ್ಲೇ ಅತಿ ಹೆಚ್ಚು ಮತದಾನದ ಪ್ರಮಾಣವು ದಾಖಲಾಗಿರುವುದು, ಮೆಕೈನ್ ವಿರುದ್ಧ ಬರಾಕ್ ಒಬಾಮ ಜಯಗಳಿಸಿದ್ದ 2008ರ ಚುನಾವಣೆಯಲ್ಲಿ. ಅಂದು ಅರುವತ್ತೆರಡು ಶೇಕಡಾ ಮತದಾನವಾಗಿತ್ತು.

ಸಮೀಕ್ಷೆ ನಿಜವಾಗಲಿದೆಯೇ?

ಚುನಾವಣಾ ಸಮೀಕ್ಷೆಗಳಲ್ಲಿ ಹೆಚ್ಚಿನವು ಜೋ ಬೈಡನ್ ಜಯಗಳಿಸುವುದಾಗಿ ಭವಿಷ್ಯ ನುಡಿದಿವೆ. ಆದರೆ ಅಮೇರಿಕಾಗೆ ಹಲವು ಬಾರಿ ಸಮೀಕ್ಷೆ ಸುಳ್ಳಾದ ಇತಿಹಾಸವಿದೆ. ಕಳೆದ ಬಾರಿ ಹಿಲರಿ ಕ್ಲಿಂಟನ್‌ ಪರವಾಗಿ ಸಮೀಕ್ಷೆಗಳು ಬಂದಿದ್ದರೂ ಅವರು ಪರಾಭವಗೊಂಡಿದ್ದರು. ಅಮೇರಿಕಾದಲ್ಲಿ ನೇರ ಮತದಾನ ಪದ್ಧತಿ ಇಲ್ಲದಿರುವುದು ಮತ್ತು ಜನರಿಂದ ಆಯ್ಕೆಯಾದ ಇಲೆಕ್ಟ್ರಲ್ ಮತದಾರರಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಅವಕಾಶವಿರುವುದು ಇದಕ್ಕೆ ಕಾರಣವೆನ್ನಲಾಗಿದೆ.

ಪರಸ್ಪರ ಟೀಕೆಗಳು

ಮತದಾನದ ಕೊನೆಯ ದಿನವಾದ ಇಂದು ಬಿರುಸಿನ ಪ್ರಚಾರ ನಡೆಯುತ್ತಿದೆ. ವಿಸ್ಗಸಿನ್, ಮಿಚಿಗನ್, ನಾರ್ತ್ ಕ್ಯಾರೋಲಿನ ಮತ್ತು ಪೆನ್ಸಿಲ್ವೇನಿಯಾಗಳಲ್ಲಿ ಪ್ರಚಾರ ಮಾಡಿದ ಟ್ರಂಪ್, ಜೋ ಬೈಡನ್ ತವರೂರಾದ ಪೆನ್ಸಿಲ್ವೇನಿಯಾದ ಸ್ಕ್ರಾಂಟನಿಗೆ ಹೋಗಿ ಬೈಡನ್ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದರು. ಬೈಡನ್ ಅಮೇರಿಕಾ ಅದ್ಯಕ್ಷನಾಗಲು ಸೂಕ್ತ ವ್ಯಕ್ತಿಯಲ್ಲ. ಅಮೆರಿಕಾದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೈಡನಿಗೂ, ಡೆಮಾಕ್ರಟಿಕ್ ಪಕ್ಷಕ್ಕೂ ಸಾಧ್ಯವಿಲ್ಲ. ಬೈಡನ್ ಅಮೇರಿಕಾವನ್ನು ನಿರಾಶ್ರಿತರಿಂದ ತುಂಬಿಸುವರು ಎಂದೆಲ್ಲಾ ಟೀಕಿಸಿದರು.

ಬೈಡನ್ ಓಹಿಯೋ, ಪೆನ್ಸಿಲ್ವೇನಿಯಾಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡರು. ಬೈಡನ್ ಪರವಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡಾ ಪ್ರಚಾರ ಕಣದಲ್ಲಿದ್ದರು. ಡೊನಾಲ್ಡ್ ಟ್ರಂಪ್ ಕೊರೋನಾ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅವರು ಅಮೇರಿಕಾದ ಸ್ಥಿರತೆ ಮತ್ತು ಭದ್ರತೆಗೆ ಅಪಾಯಕಾರಿಯಾಗಿದ್ದಾರೆಂದು ಬೈಡನ್ ಟೀಕಿಸಿದರು.

ಯುವ ಮತದಾರರ ಪಾತ್ರ

ಮತದಾನ ನಡೆಯಲಿರುವ ವಿಸ್ಕಾಂಸಿನ್, ಮಚಿಗನ್, ಪೆನ್ಸಿಲ್ವೇನಿಯಾ, ಫ್ಲೋರಿಡಾಗಳು ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದು, ಹೆಚ್ಚು ಇಲೆಕ್ಟ್ರಲ್ ಮತದಾರರನ್ನು ಹೊಂದಿದೆ. ಈ ಬಾರಿ ಮೂವತ್ತು ವರ್ಷ ವಯಸ್ಸಿಗಿಂತ ಕಿರಿಯರಾದ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಹಾಗೆಯೇ ಆಫ್ರಿಕನ್-ಅಮೇರಿಕನ್ ವಂಶಸ್ಥರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಇವರು ಕಳೆದ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಲು ನಿರಾಸಕ್ತಿ ತೋರಿಸಿದ್ದರು. ಆದರೆ 2008ರಲ್ಲಿ ಬರಾಕ್ ಒಬಾಮ ಜಯಗಳಿಸುವಲ್ಲಿ ತಮ್ಮ ಕೊಡುಗೆ ನೀಡಿದ್ದರು. ಬ್ಲಾಕ್ ಲೈವ್ ಮ್ಯಾಟರ್ ಕೂಡಾ ಈ ಬಾರಿಯ ಚುನಾವಣೆಯಲ್ಲಿ ದೊಡ್ಡ ಪಾತ್ರ ವಹಿಸಲಿದೆಯೆಂದು ತಜ್ಞರ ಅಂಬೋಣ. ಫ್ಲೊರಿಡಾ ಇತ್ಯಾದಿ ರಾಜ್ಯಗಳಲ್ಲಿ ಅರುವತ್ತೈದು ವರ್ಷಕ್ಕಿಂತ ಹೆಚ್ಚಿನ ವಯಸ್ಸಿರುವ ಹಿರಿಯ ಮತದಾರರು ಗಣನೀಯ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾಗಿ ವರದಿಯಾಗಿದೆ.

ಹಿಂಸಾಚಾರಕ್ಕೆ ಸಾಧ್ಯತೆ?

ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ಕಂಡು ಬಂದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಟ್ರಂಪ್ ಹೇಳಿದ್ದಾರೆ. ಫಲಿತಾಂಶ ಬಂದ ಬಳಿಕ ದೇಶದಲ್ಲಿ ಹಿಂಸಾಚಾರ ಉಂಟಾಗುವ ಭೀತಿಯೂ ಸಾಮಾನ್ಯ ಜನರನ್ನು ಕಾಡುತ್ತಿದೆ. ಹಾಗಾಗಿ ಅಂಗಡಿ ಮುಂಗಟ್ಟು, ಕಛೇರಿ ಇತ್ಯಾದಿಗಳನ್ನು ಮುಚ್ಚಲು ಹಲವು ಮಾಲಕರು ತಯಾರಾಗುತ್ತಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

ಕೊರೋನಾ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣವು ಕಡಿಮೆಯಾಗಲಿದೆಯೆಂದು ಈ ಮೊದಲು ನಿರೀಕ್ಷಿಸಲಾಗಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅಮೇರಿಕಾದ ಇತಿಹಾಸದಲ್ಲೇ ಅತಿಹೆಚ್ಚು ಮತದಾನ ನಡೆದ ಚುನಾವಣೆಯಾಗುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿದೆ. ಸಂಘರ್ಷ ನಡೆಯುವ ಸಾಧ್ಯತೆಯನ್ನು ಮನಗಂಡು ದೇಶಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು