ಬರ್ಮಿಂಗ್ಹ್ಯಾಮ್: ಭಾರತೀಯ ಸೇನೆಯು ವಿಶ್ವದಲ್ಲೇ ನಾಲ್ಕನೇ ಅತಿ ಬಲಿಷ್ಠ ಸೇನೆಯೆಂದು ‘ಮಿಲಿಟರಿ ಡೈರೆಕ್ಟ್‘ ವೆಬ್ಸೈಟಿನ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಅದೇ ವೇಳೆ ಚೀನಾದ ಮಿಲಿಟರಿ ಶಕ್ತಿಯು ಈ ವರದಿಯಲ್ಲಿ ಮೊತ್ತ ಮೊದಲನೆಯ ಸ್ಥಾನದಲ್ಲಿದೆ. ಬಳಿಕ ಅಮೇರಿಕಾ ಮತ್ತು ರಷ್ಯಾ ಎರಡನೆಯ ಮತ್ತು ಮೂರನೇಯ ಸ್ಥಾನದಲ್ಲಿದೆ.
ಯುದ್ಧವೇನಾದರೂ ಸಂಭವಿಸಿದರೆ, 14141 ವಾಯು ನೌಕೆಗಳಿರುವ ಅಮೇರಿಕಾವು 4682 ವಾಯುನೌಕೆಯನ್ನು ಹೊಂದಿರುವ ರಷ್ಯಾವನ್ನೂ, 3587 ವಾಯುನೌಕೆಗಳಿರುವ ಚೀನಾವನ್ನೂ ವಾಯು ಯುದ್ಧದಲ್ಲಿ ಸೋಲಿಸಿ ಬಿಡಬಹುದು.
ಅದೇ ರೀತಿ ಭೂ ಯುದ್ಧದಲ್ಲಿ 54866 ಯುದ್ಧ ವಾಹನಗಳನ್ನು ಹೊಂದಿರುವ ರಷ್ಯಾಪಡೆಯು, 50326 ಯುದ್ಧ ವಾಹನಗಳನ್ನು ಹೊಂದಿರುವ ಅಮೇರಿಕಾವನ್ನೂ, 41641 ಯುದ್ಧ ವಾಹನಗಳನ್ನು ಹೊಂದಿರುವ ಚೀನಾವನ್ನೂ ಪರಾಭವಗೊಳಿಸಬಹುದು.
ಜಲಯುದ್ಧದಲ್ಲಿ 406 ಯುದ್ಧನೌಕೆಗಳನ್ನು ಹೊಂದಿರುವ ಚೀನಾವು, 278 ಯುದ್ಧನೌಕೆಗಳನ್ನು ಹೊಂದಿರುವ ರಷ್ಯಾವನ್ನೂ, 202 ಯುದ್ಧನೌಕೆಗಳ ಅಮೇರಿಕಾವನ್ನೂ ಸೋಲಿಸಬಹುದು ಎಂದು ವರದಿ ಹೇಳುತ್ತದೆ.
ಬಜೆಟ್ನಲ್ಲಿ ಸೇನೆಗಾಗಿ ಮೀಸಲಿರಿಸಿದ ಹಣ, ಕ್ರಿಯಾಶೀಲ ಜವಾನರು, ವಾಯು, ಭೂ ಮತ್ತು ನೌಕಾಸೇನೆಗಳು ಹೊಂದಿರುವ ಪರಮಾಣು ಸಾಮರ್ಥ್ಯ, ಪಡೆಯುವ ವೇತನ ಮತ್ತು ಹೊಂದಿರುವ ಉಪಕರಣಗಳ ಪ್ರಮಾಣ ಇತ್ಯಾದಿಗಳ ಆಧಾರದಲ್ಲಿ ‘ಸೇನಾ ಶಕ್ತಿ ಸೂಚ್ಯಂಕ‘ವನ್ನು ತಯಾರಿಸಲಾಗಿದೆ.
ಈ ಸೂಚ್ಯಂಕದ ಅನುಸಾರ ಚೀನಾವು ನೂರರಲ್ಲಿ 82 ಅಂಕ ಗಳಿಸಿದರೆ, ಯುಎಸ್ಎ 74, ರಷ್ಯಾ 69, ಭಾರತ 61, ಫ್ರಾನ್ಸ್ 58 ಮತ್ತು ಬ್ರಿಟನ್ 43 ಅಂಕಗಳನ್ನು ಗಳಿಸಿದೆ. ಜಗತ್ತಿನಲ್ಲೇ ಮಿಲಿಟರಿ ಉದ್ಧೇಶಕ್ಕಾಗಿ ಅತಿಹೆಚ್ಚು ವೆಚ್ಚ ಮಾಡುವ ಅಮೇರಿಕಾವು ಈ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಷ್ಟೇ ತೃಪ್ತಿ ಪಟ್ಟಿದೆ.