ನವದೆಹಲಿ(8-12-2020): ಕೃಷಿ ಮಸೂದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಮತ್ತು ಅವುಗಳನ್ನು ಬೆಂಬಲಿಸುವ ಇತರ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗುವ ಸೂಚನೆಗಳು ಕಂಡು ಬಂದಿದೆ. ರೈತ ಪ್ರತಿಭಟನೆಯ ಕೇಂದ್ರ ಬಿಂದುವಾದ ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದು ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ. ದಕ್ಷಿಣದಲ್ಲಿ ತಮಿಳುನಾಡು ಭಾರತ್ ಬಂದ್ಗೆ ಹೆಚ್ಚಿನ ಬೆಂಬಲ ನೀಡುತ್ತಿದೆ.
ರೈತ ಪ್ರತಿಭಟನೆ ಎರಡು ವಾರಗಳು ತುಂಬುತ್ತಿರುವ ಈ ಹೊತ್ತಿನ ವರೆಗೂ ಕೇಂದ್ರ ಸರಕಾರ ಮತ್ತು ರೈತ, ಕಾರ್ಮಿಕ ಸಂಘಟನೆಗಳ ನಡುವೆ ಇನ್ನೂ ಒಮ್ಮತ ಮೂಡಿಲ್ಲ. ಪ್ರತಿಭಟನಾಕಾರರ ಮೂವತ್ತೈದು ಪ್ರತಿನಿಧಿಗಳ ಜೊತೆಗೆ ಸುಮಾರು ಐದು ಬಾರಿ ಸಭೆ ನಡೆಸಿದರೂ ಯಾವುದೇ ಫಲ ಕಂಡಿಲ್ಲ.
ಹೀಗಾಗಿ ಕೇಂದ್ರ ಸರಕಾರವನ್ನು ಮಣಿಸುವ ಸಲುವಾಗಿ ರೈತ, ಪ್ರಗತಿಪರ, ಕಾರ್ಮಿಕ ಸಂಘಟನೆಗಳು, ಪ್ರತಿಪಕ್ಷಗಳು, ಹಲವು ಪ್ರಾದೇಶಿಕ ಪಕ್ಷಗಳು ಇಂದು ಭಾರತ್ ಬಂದಿಗೆ ಕರೆ ನೀಡಿವೆ.
ಇತ್ತ ಕಡೆ ಬೆಂಗಳೂರಿನಲ್ಲಿ ಜನ ಜೀವನ ಸಾಮಾನ್ಯವಾಗಿದ್ದರೂ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಕರಾವಳಿ ಜಿಲ್ಲೆಗಳಿಗೆ ಅಷ್ಟೇನೂ ಬಿಸಿ ತಟ್ಟಿಲ್ಲ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆಯನ್ನು ಮಾಡಲಾಗಿದೆ. ಇಲ್ಲಿ ಟ್ಯಾಕ್ಸಿ ಚಾಲಕರು ಮತ್ತು ರೈತ ಸಂಘಟನೆಗಳು ಮುತ್ತಿಗೆ ಹಾಕುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಲ್ಲಿ ಬೆಳಿಗ್ಗಿನಿಂದಲೇ ಪ್ರತಿಭಟನೆಯ ಹುಮ್ಮಸ್ಸು ಕಾಣತೊಡಗಿದ್ದು, ಟಯರಿಗೆ ಬೆಂಕಿ ಹಚ್ಚುವುದು, ರಸ್ತೆ ತಡೆ, ಪಂಜಿನ ಮೆರವಣಿಗೆ ಮುಂತಾದ ವಿದ್ಯಮಾನಗಳು ಜರುಗಿದೆ.