ನವದೆಹಲಿ(08-12-2020): ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತ್ ಬಂದ್ ಇಂದು ದೇಶದಾದ್ಯಂತ ಕೇಂದ್ರ ಸರಕಾರದ ವಿರುದ್ಧ ಆಕ್ರೋಶದ ಕಿಡಿಯನ್ನು ಹೆಚ್ಚಿಸಿದೆ.
ಅವಾಸ್ತವ ಮತ್ತು ಮಾರಕ 3 ಮಸೂದೆ ವಿರುದ್ಧ ರೈತರ ಪ್ರತಿಭಟನೆ 13 ನೇ ದಿನಕ್ಕೆ ಕಾಲಿಟ್ಟಿದೆ. ರೈತರು ಮತ್ತು ಸರ್ಕಾರದ ನಡುವಿನ ಆರನೇ ಸುತ್ತಿನ ಮಾತುಕತೆಗೆ ಒಂದು ದಿನ ಮೊದಲು ಭಾರತ್ ಬಂದ್ ಗೆ ರೈತರು ಕರೆ ನೀಡಿದ್ದಾರೆ.
ಕಾಂಗ್ರೆಸ್ ಸೇರಿದಂತೆ 18 ರಾಜಕೀಯ ಪಕ್ಷಗಳು ಭಾರತ್ ಬಂದ್ ಕರೆಗೆ ಬೆಂಬಲ ಘೋಷಿಸಿವೆ. ಸಾರಿಗೆ ಸೇವೆಗಳು ಮತ್ತು ತರಕಾರಿಗಳು ಮತ್ತು ಹಣ್ಣುಗಳ ಅಗತ್ಯ ವಸ್ತುಗಳ ಸರಬರಾಜು ಮೇಲೆ ದೇಶದಾದ್ಯಂತ ಪರಿಣಾಮ ಬೀರಿದೆ.
ಬಿಹಾರದ ಖಾಗೇರಿಯಾದಲ್ಲಿ ಎನ್ಎಚ್ 31 ನ್ನು ಎಡ ಪಕ್ಷಗಳು ನಿರ್ಬಂಧಿಸಿವೆ. ನೋಯ್ಡಾದ ಪ್ರತಿಭಟನಾಕಾರರು ಎಮ್ಮೆ ಮುಂದೆ ಹಾವು ಮೋಡಿ ಮಾಡುವವರಂತೆ ಕೊಳಲನ್ನು ನುಡಿಸಿ ವಿಶಿಷ್ಟ ಶೈಲಿಯ ಪ್ರತಿಭಟನೆ ನಡೆಸಿದ್ದಾರೆ.
ರೈಲ್ವೇ ಸಂಚಾರವನ್ನು ಹಲವು ರಾಜ್ಯಗಳಲ್ಲಿ ತಡೆಯಲಾಗಿದೆ. ಕರ್ನಾಟಕದ ಹುಬ್ಬಳ್ಳಿ, ಧಾರವಾಡದಲ್ಲಿ ಮುಂಜಾನೆಯೇ ರೈತರು ಬೀದಿಗಿಳಿದಿದ್ದು, ರಸ್ತೆ ಬಂದ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಳಗಾವಿ ಬಸ್ ನಿಲ್ದಾಣದ ಎದುರು ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ಮೈಸೂರು, ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ.