ಬೆಂಗಳೂರು (16-11-2020): ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿರುವ ಬಗ್ಗೆ ಇದೀಗ ಬಹಿರಂಗವಾಗಿದೆ.
ಅಪ್ರಾಪ್ತ ಆರೋಪಿಯ ಕುಟುಂಬವು 17 ವರ್ಷ ವಯಸ್ಸಿನ ಬಾಲಕನನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದೆ.
ಆಗಸ್ಟ್ 11 ರಂದು ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಬಾಲಕನ ಕುರಿತ ಕರ್ನಾಟಕ ಹೈಕೋರ್ಟ್ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ತನಿಖಾ ಸಂಸ್ಥೆಗಳು ಆತನನ್ನು ಬಂಧಿಸಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲಿಗೆ ಹಾಕಿದೆ. ಆದರೆ ಅವರ ವಯಸ್ಸು 17 ಎಂದು ದಾಖಲೆಗಳು ತೋರಿಸಿದ್ದರೂ ಪೊಲೀಸರು ಈ ಕೃತ್ಯವನ್ನು ಮಾಡಿದ್ದಾರೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಬೇಕೆಂಬ ನಿಯಮ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದ್ದಾರೆ.
ಆಗಸ್ಟ್ 12 ರಂದು ಬಂಧನವಾದ ಕೂಡಲೇ ಆರೋಪಿ ಬಾಲಕನ ತಾಯಿ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಪ್ರಕರಣದಲ್ಲಿ ಆರೋಪಿಗಯನ್ನು ಪ್ರತಿನಿಧಿಸುವ ವಕೀಲ ಬಸವಾ ಕುನಾಲೆ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ. ಬಂಧಿತ ವ್ಯಕ್ತಿಗೆ 17 ವರ್ಷ ವಯಸ್ಸಾಗಿದೆ ಎಂದು ತನಿಖಾ ಅಧಿಕಾರಿಗಳಿಗೆ ತಿಳಿಸಲಾಗಿದೆ ಮತ್ತು ದಾಖಲೆಗಳನ್ನು ಹಾಜರುಪಡಿಸಲಾಗಿದೆ. ಆದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಪರಪ್ಪನ ಅಗ್ರಹಾರದಲ್ಲಿ ಕೂಡಿ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಉತ್ತರಿಸುವಂತೆ ಪೊಲಿಸರಿಗೆ ಹೈಕೋರ್ಟ್ ಸೂಚಿಸಿದೆ.