ಕೋಲ್ಕತಾ(20-11-2020): ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೊಲೆ ರಾಜಕೀಯ ಪ್ರಾರಂಭವಾಗಿದೆ.
ಬಿಜೆಪಿ-ಟಿಎಂಸಿ ನಾಯಕರ ಸಾಲು-ಸಾಲು ಹೆಣಗಳು ಬೀಳುತ್ತಿರುವುದು ವರದಿಯಾಗುತ್ತಿದೆ. ಬುಧವಾರ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಕೊಲೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತರೊಬ್ಬರ ಹತ್ಯೆ ನಡೆದಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಭಟ್ಪಾರಾದಲ್ಲಿ ಬುಧವಾರ ತಡರಾತ್ರಿ ನಡೆದ ಘಟನೆಯಲ್ಲಿ ಟಿಎಂಸಿ ಕಾರ್ಯಕರ್ತ ಆಕಾಶ್ ಪ್ರಸಾದ್ (22) ಎಂಬುವವರನ್ನು ಇರಿದು ಕೊಲೆ ಮಾಡಲಾಗಿದೆ.
ಅವರ ಮೇಲೆ ನಾಡ ಬಾಂಬ್ಗಳನ್ನು ಎಸೆಯಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪ್ರಸಾದನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಟಿಎಂಸಿ ಜಿಲ್ಲಾ ಅಧ್ಯಕ್ಷ ಜ್ಯೋತಿ ಪ್ರಿಯೊ ಖಂಡಿಸಿದ್ದು, ಕೃತ್ಯದ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಇಂತಹ ದಾಳಿ ಪ್ರಕರಣಗಳು ನಡೆಯುತ್ತಿದೆ. ಬಿಜೆಪಿ ಟಿಎಂಸಿ ಕಾರ್ಯಕರ್ತರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಮೊದಲು ಬಂಗಾಳದ ಉತ್ತರ ಪರಗಾನದಲ್ಲಿ ಕೌನ್ಸಿಲರ್ ಮನೀಶ್ ಶುಕ್ಲಾ ಅವರನ್ನು ಕೊಲ್ಕತ್ತಾದಿಂದ 20 ಕಿ.ಮೀ ದೂರದಲ್ಲಿ ನಾಲ್ಕು ಮೋಟಾರ್ಸೈಕಲ್ ನಲ್ಲಿ ಬಂದ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದು ಬಂಗಾಳದಲ್ಲಿ ರಾಜಕೀಯ ಕಿತ್ತಾಟಕ್ಕೆ ಮತ್ತಷ್ಟು ಆಸ್ಪದವನ್ನು ಮಾಡಿದೆ. ಬೆಂಗಾಳದ ಬಿಜೆಪಿ ನಾಯಕ ಇತ್ತೀಚೆಗೆ ಟಿಎಂಸಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿ ಕೈಕಾಲು ಮುರಿಯುವ ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಬೆಂಗಾಳದಲ್ಲಿ ರಕ್ತ ಹರಿದಿದೆ.