ಕೋಲ್ಕತ್ತಾ(19-12-2020): ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಹೇಗಾದರೂ ಈ ಬಾರಿ ಇಳಿಸಬೇಕೆಂದು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿರುವ ಮಧ್ಯೆ ಟಿಎಂಸಿ ಶಾಸಕರ ಸಾಲು-ಸಾಲು ರಾಜೀನಾಮೆ ದೀದಿಯನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.
ಪಶ್ಚಿಮ ಬಂಗಾಳದಲ್ಲಿ ನಾಲ್ವರು ತೃಣಮೂಲ ಕಾಂಗ್ರೆಸ್ ಶಾಸಕರು ಪಕ್ಷ ತೊರೆದಿದ್ದಾರೆ. ಈ ಮೊದಲು ಶಿಲ್ಭದ್ರ ದತ್ತ, ಸುವೇಂದು ಅಧಿಕಾರಿ, ಜಿತೇಂದ್ರ ತಿವಾರಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಇದೀಗ ಟಿಎಂಸಿ ಶಾಸಕ ಬನಶ್ರೀ ಮೈಟಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಇ-ಮೇಲ್ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ರವಾನಿಸಿರುವುದಾಗಿ ಹೇಳಿದ್ದಾರೆ.
ಬನಶ್ರೀ ಮೈಟಿ ರಾಜೀನಾಮೆಯಿಂದಾಗಿ ಕಳೆದ 48 ಗಂಟೆಗಳಲ್ಲಿ ಟಿಎಂಸಿಯ ನಾಲ್ವರು ಶಾಸಕರು ರಾಜೀನಾಮೆ ನೀಡಿದಂತಾಗಿದೆ. ಇಂದಿನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ 2 ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದಾರೆ. ಈ ವೇಳೆ ಟಿಎಂಸಿಗೆ ರಾಜೀನಾಮೆ ನೀಡಿದ ಮುಖಂಡರೆಲ್ಲರೂ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ.